ಜಿಲ್ಲೆ

41.65 ಲಕ್ಷ ರೂ. ಲಾಭ ಗಳಿಕೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಅಮರಗೋಳದಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ನಿಯಮಿತ 2024-25ನೇ ಸಾಲಿನಲ್ಲಿ 41,65,753 ರೂ. ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸಾಲಿನಲ್ಲಿ 28 ಲಕ್ಷ ರೂ. ಲಾಭ ಗಳಿಸಿದ್ದೇವು. 4860 ಸದಸ್ಯರು, 5260 ಸದಸ್ಯರನ್ನು ಹೊಂದಿದೆ. 1.46 ಕೋಟಿ ರೂ. ಶೇರು ಬಂಡವಾಳ, 32.94 ಕೋಟಿ ರೂ. ಠೇವಣಿ, ಇತ್ಯಾದಿ ಸೇರಿ 53.64 ಕೋಟಿ ರೂ. ವ್ಯವಹಾರ ದಾಖಲಿಸಿದೆ. 47 ಕೋಟಿ ರೂ. ಸಾಲ ನೀಡಿದ್ದೇವೆ. 2009ರಲ್ಲಿ ಕೇವಲ 111 ಸದಸ್ಯರೊಂದಿಗೆ 2.50 ಲಕ್ಷ ರೂ. ಬಂಡವಾಳದಿಂದ ಸಂಸ್ಥೆ ಆರಂಭಿಸಲಾಗಿತ್ತು ಎಂದು ವಿವರಿಸಿದರು.

ಧಾರವಾಡದ ಅಮ್ಮಿನಭಾವಿ, ನರೇಂದ್ರ ಹಾಗೂ ಹುಬ್ಬಳ್ಳಿಯ ಗೋಕುಲ ಗ್ರಾಮದಲ್ಲಿ ಶಾಖೆಗಳನ್ನು ತೆರೆದಿದ್ದೇವೆ. ಮುಂದಿನ ದಿನಗಳಲ್ಲಿ ಕಲಘಟಗಿ, ನವಲಗುಂದ, ಕುಂದಗೋಳ, ಅಣ್ಣಿಗೇರಿ, ಅಳ್ನಾವರದಲ್ಲಿ ಶಾಖೆಗಳನ್ನು ತೆರೆಯುವ ಉದ್ದೇಶ ಇದೆ ಎಂದು ಹೇಳಿದರು.

ಇಂದು ವಾರ್ಷಿಕ ಸಭೆ:

ನವನಗರ ಶ್ರೀ ಸಿದ್ದೇಶ್ವರ ಖಾದಿ ಗ್ರಾಮೋದ್ಯೋಗ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಸೆ. 13ರಂದು ಬೆಳಗ್ಗೆ 10 ಗಂಟೆಗೆ 17ನೇ ವಾರ್ಷಿಕ ಮಹಾಸಭೆ ನಡೆಯಲಿದೆ. ಉಪ್ಪಿನಬೆಟಗೇರಿಯ ಶ್ರೀ ಕುಮಾರ ವಿರುಪಾಕ್ಷ ಸ್ವಾಮೀಜಿ, ಕುಂದಗೋಳ ಕಲ್ಯಾಣಪುರಮಠದ ಶ್ರೀ ಅಭಿನವ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸುವರು. ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಉದ್ಘಾಟಿಸುವರು. ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಹೊರಕೇರಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಮನಗುಂಡಿ ಹಾಗೂ ಸದಸ್ಯೆ ಸುನೀತಾ ಮಾಳದಕರ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ರಾಮಚಂದ್ರ ಚವ್ಹಾಣ, ಲಲಿತಾ ಕಲ್ಲಯ್ಯನವರ, ಕಲ್ಲಪ್ಪ ಡೊಂಕನವರ, ಕುತೇಜಾ ಸುಂಕದ, ಘನಮಠೇಶ ಮಠ, ಸಿಇಒ ತೇಜಸ್ವಿನಿ ನಾಯ್ಕ, ಶ್ವೇತಾ ಹೆಗಡೆ, ಆಸ್ಮಾ ನದಾಫ್ ಇದ್ದರು.