ಬಂಕಾಪುರ: ಬರಗಾಲದಲ್ಲಿ ರೈತರ ಬೆಳೆಗಳಿಗೆ ಆಸರೆ ಆಗಬೇಕಾಗಿದ್ದ ಶಿಗ್ಗಾಂವಿ ಏತ ನೀರಾವರಿ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯಂದ ನನೆಗುದಿಗೆ ಬಿದ್ದಿದ್ದು, ಶಿಗ್ಗಾಂವಿ- ಸವಣೂರ ತಾಲೂಕಿನ ರೈತರು ಬೆಳೆ ರಕ್ಷಣೆಗೆ ಪರದಾಡುವಂತಾಗಿದೆ.
ಶಿಗ್ಗಾಂವಿ- ಬಂಕಾಪುರ ಪಟ್ಟಣಕ್ಕೆ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಸಮಸ್ಯೆಯಾಗದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2013ರಲ್ಲಿ ಏತ ನೀರಾವರಿ ಯೋಜನೆ ಜಾರಿಗೊಳಿಸಿದ್ದರು. ಆದರೆ, ಮಹತ್ವಾಕಾಂಕ್ಷೆಯ ಯೋಜನೆ ಈಗ ಅಧಿಕಾರಿಗಳ ಮತ್ತು ಉಸ್ತುವಾರಿ ಕಂಪನಿಯ ನಿರ್ಲಕ್ಷ್ಯಂದ ರೈತರ ಹೊಲಗಳಿಗೆ ನೀರು ತಲುಪದಂತಾಗಿದೆ. ಕೇವಲ ಬಂಕಾಪುರ ಮತ್ತು ಶಿಗ್ಗಾಂವಿ ಪಟ್ಟಣಕ್ಕೆ ಮಾತ್ರ ನೀರು ಪೂರೈಸಿ, ರೈತರ ಸಂಪುಗಳಿಗೆ ನೀರು ಪೂರೈಕೆ ಮಾಡದ ಕಾರಣ ಹೊಲಗಳಲ್ಲಿ ಸಂಪುಗಳಿದ್ದರೂ ನೀರು ಇಲ್ಲದಂತಾಗಿದೆ.
ಕಳೆದ ಎರಡು ವರ್ಷ ಉತ್ತಮ ಮಳೆಯಾಗಿತ್ತು. ಆದರೆ, ಈ ವರ್ಷ ಮುಂಗಾರು ಕೈಕೊಟ್ಟ ಕಾರಣ ಬಿತ್ತಿದ ಬೆಳೆಗಳನ್ನು ಕಾಪಾಡಲು ರೈತರು ಮುಗಿಲಿನತ್ತ ಮುಖ ಮಾಡಿದ್ದಾರೆ. ಅಲ್ಪ ಸ್ವಲ್ಪ ಮಳೆಯಿಂದ ಬಿತ್ತನೆ ಮಾಡಿರುವ ರೈತರ ಬೆಳೆ ಮಳೆಯಿಲ್ಲದೆ ಒಣಗುತ್ತಿವೆ. ಇಂತಹ ಸಮಯದಲ್ಲಿ ರೈತರ ಸಹಾಯಕ್ಕೆ ಬರಬೇಕಾಗಿದ್ದ ನೀರಾವರಿ ಇಲಾಖೆ ಇಂದು ನಾಳೆ ಎಂದು ಹೇಳುತ್ತ ಕಾಲಹರಣ ಮಾಡುತ್ತಿದೆ.
ಹಳೇಬಂಕಾಪುರ ಸಮೀಪದ ಸಣ್ಣ ಕೆರೆಗಳನ್ನು ತುಂಬಿಸುವ ಜಾಕ್ವೆಲ್ ಹತ್ತಿರ 62ನೇ ಸಂಪಿನ ಹತ್ತಿರ ಪೈಪ್ಲೈನ್ ಒಡೆದು ಎರಡು ವರ್ಷವಾದರೂ ಇನ್ನೂ ರಿಪೇರಿ ಮಾಡಿಲ್ಲ. ಯೋಜನೆ ನಿರ್ವಹಿಸುವ ಆರ್.ಆರ್. ಕಂಪನಿ ನಿರ್ಲಕ್ಷ್ಯ ವಹಿಸಿದ್ದರಿಂದ ಆ ಭಾಗದ ಸುಮಾರು ಐದು ಸಂಪು ಮತ್ತು ಆರು ಕೆರೆಗಳಿಗೆ ಕಳೆದ ಮೂರು ವರ್ಷಗಳಿಂದ ನೀರು ಪೂರೈಕೆ ಮಾಡಿಲ್ಲ. ಇದರಿಂದ ಆ ಭಾಗದ ರೈತರು ಈ ಯೋಜನೆಯಿಂದ ವಂಚಿತರಾಗಿದ್ದಾರೆ.
ಏತ ನೀರಾವರಿ ಯೋಜನೆ ಮೂಲಕ ರೈತರ ಹೊಲಗಳಲ್ಲಿ ನಿರ್ವಿುಸಿರುವ ಸಂಪುಗಳಿಗೆ ನೀರು ಪೂರೈಕೆಯಾಗದ ಕಾರಣ ಸಂಪುಗಳಲ್ಲಿದ್ದ ಪಂಪ್ಸೆಟ್, ಮೋಟರ್ಗಳನ್ನು ಉಸ್ತುವಾರಿ ಕಂಪನಿ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಇದರಿಂದ ಸಂಪುಗಳಿಗೆ ರೈತರ ಒಡನಾಟ ಕಡಿಮೆಯಾಗಿದೆ. ಇದರ ಪರಿಣಾಮ ಕೆಲ ಸಂಪುಗಳು ಜೂಜಾಟದ ಅಡ್ಡೆಗಳಾಗಿವೆ. ಸಂಪುಗಳಲ್ಲಿ ಅನೈತಿಕ ಚಟುವಟಿಕೆ, ಪಾರ್ಟಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಮಳೆಯಿಲ್ಲದೆ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರುವ ರೈತರ ಸಹಾಯಕ್ಕೆ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಆಸಕ್ತ ರೈತರ ಸಂಪುಗಳಿಗೆ ನೀರು ಪೂರೈಸಬೇಕು ಹಾಗೂ ಈ ಯೋಜನೆಯಡಿ ಬರುವ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಸವಣೂರ ತಾಲೂಕಿನ ಹಲಸೂರ ಬಳಿ ವರದಾ ನದಿ ದಂಡೆಯಲ್ಲಿ ಒಟ್ಟು 87.71 ಕೋಟಿ ರೂ.ಗಳ ವೆಚ್ಚದಲ್ಲಿ ಶಿಗ್ಗಾಂವಿ ಏತ ನೀರಾವರಿ ಯೋಜನೆ ಕಾರ್ಯಗತಗೊಂಡಿದೆ. ಈ ಯೋಜನೆಯಿಂದ ಒಟ್ಟು 1.35 ಟಿಎಂಸಿ ನೀರಿನ ಬಳಕೆ ಮಾಡಲಾಗುತ್ತಿದೆ. ಇಲ್ಲಿಂದ ಪೈಪ್ಲೈನ್ ಮೂಲಕ ನೀರಾವರಿ ಯೋಜನೆಯ ಕ್ಷೇತ್ರ ವ್ಯಾಪ್ತಿಯ ಪ್ರದೇಶದಲ್ಲಿ ನಿರ್ವಿುಸಿರುವ 6 ಬೃಹತ್ ನೀರು ಸಂಗ್ರಹಣಾ ತೊಟ್ಟಿಗಳಲ್ಲಿ (ಡಿಲೇವರಿ ಚೇಂಬರ್) ನೀರು ಸಂಗ್ರಹಿಸಿ ಅಲ್ಲಿಂದ ಮತ್ತೆ ಪೈಪ್ಲೈನ್ ಮೂಲಕ 85 ಹೆಕ್ಟೇರ್ ಪ್ರದೇಶಕ್ಕೊಂದರಂತೆ ನಿರ್ವಿುಸಿರುವ ರೈತರ ಜಮೀನುಗಳಲ್ಲಿನ 119 ಸಂಪುಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ನಂತರ ಸಂಪುಗಳಿಂದ ಮೋಟಾರಗಳ ಮೂಲಕ ನೇರವಾಗಿ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆ ಒಟ್ಟು 10,115 ಹೆಕ್ಟೇರ್ ಜಮೀನುಗಳಿಗೆ ನೀರು ಒದಗಿಸುವ ಯೋಜನೆಯಾಗಿದೆ.
ನಾನು ಹೊಸದಾಗಿ ಬಂದಿದ್ದೇನೆ. ಎಲ್ಲೆಲ್ಲಿ ಪೈಪ್ಲೈನ್ ರಿಪೇರಿ ಇದೆ, ಅದನ್ನು ಸರಿಪಡಿಸಲು ಸೂಚಿಸಿದ್ದೇನೆ. ಹಳೇಬಂಕಾಪುರ ಹತ್ತಿರದ ಪೈಪ್ಲೈನ್ ರಿಪೇರಿ ಮಾಡುತ್ತಿದ್ದಾರೆ. ನಾಳೆಯಿಂದಲೇ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆರಂಭಿಸಲಾಗುವುದು. ಆಸಕ್ತ ರೈತರ ಸಂಪುಗಳಿಗೆ ಬೇಡಿಕೆಗನುಸಾರ ಶೀಘ್ರ ನೀರು ಪೂರೈಕೆ ಮಾಡಲಾಗುವುದು. | ಎ.ಐ. ಹುಗ್ಗಿ, ಎಇಇ ಶಿಗ್ಗಾಂವಿ ಏತ ನೀರಾವರಿ ಇಲಾಖೆ ಸ್ಥಳೀಯ ಶಾಸಕರು ರೈತರ ಆರ್ಥಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ದೂರದ ವರದಾ ನದಿಯಿಂದ ತಾಲೂಕಿಗೆ ನೀರನ್ನು ಹರಿಸಿ ಉತ್ತಮ ಯೋಜನೆ ನೀಡಿದ್ದಾರೆ. ಆದರೆ, ನೀರಾವರಿ ಅಧಿಕಾರಿಗಳ ನಿರಾಸಕ್ತಿಯಿಂದ ಸಂಪುಗಳು ಪಾಳು ಬಿದ್ದಿವೆ. ಕೂಡಲೇ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಿ, ಸಂಪುಗಳಿಗೆ ನೀರು ಹರಿಸಿದರೆ. ಅಳಿದುಳಿದ ಬೆಳೆಯನ್ನಾದರೂ ಉಳಿಸಿಕೊಳ್ಳಬಹುದು. | ಉಮೇಶ ಅಂಗಡಿ. ಬಿಸನಳ್ಳಿ ಗ್ರಾಮದ ರೈತ