ಚಿತ್ರದುರ್ಗ: ಜಿಲ್ಲೆಯ 1,281 ಮಂದಿ ವಿವಿಧ ರೀತಿ ಶ್ರವಣದೋಷದಿಂದ ಬಳಲುತ್ತಿದ್ದು, ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ರೇಣುಪ್ರಸಾದ್ ತಿಳಿಸಿದರು.
ವಿಶ್ವ ಶ್ರವಣ ದಿನದ ಅಂಗವಾಗಿ ಶುಕ್ರವಾರ ಆರೋಗ್ಯ ಇಲಾಖೆಯಿಂದ ನೆಹರು ನಗರದ ಜ್ಞಾನವಿಕಾಸ ಪ್ರೌಢಾಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿದರು.
6 ವರ್ಷದ ಒಳಗಿನವರಲ್ಲಿ ಗಂಭೀರ ಸ್ವರೂಪದ ಶ್ರವಣದೋಷ ನಿವಾರಣೆಗೆ ಆದ್ಯತೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಈ ಬಾರಿ ದುಬಾರಿ ವೆಚ್ಚದ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು 5 ಮಕ್ಕಳಿಗೆ ಮಾಡಲಾಗಿದ್ದು, ಉಳಿದ 15 ಫಲಾನುಭವಿಗಳಿಗೆ ಶ್ರವಣ ಸಾಧನ ನೀಡಲಾಗಿದೆ ಎಂದರು.
ಶಾಲೆಯ ಸಂಯೋಜಕರಾದ ಮಾರುತಿ, ರುದ್ರಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಗೋಪಾಲಕೃಷ್ಣ, ಆಶಾ ಕಾರ್ಯಕರ್ತೆಯರಾದ ವಾಣಿ, ದ್ಯಾಮಕ್ಕ ಇತರರಿದ್ದರು.
ವಿಶ್ವದ 430 ದಶಲಕ್ಷ ಮಂದಿಗೆ ದೋಷ
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರಪಂಚದ 430 ದಶಲಕ್ಷ ಜನರು ಶ್ರವಣ ದೋಷದಿಂದ ಬಳಲುತ್ತಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ 700 ದಶಲಕ್ಷ ದಾಟುವ ಆತಂಕವಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ತಿಳಿಸಿದರು.
ಕಳೆದ 5 ವರ್ಷದಲ್ಲಿ ರಾಜ್ಯಾದ್ಯಂತ ಎನ್‌ಪಿಪಿಸಿಡಿ ಕಾರ್ಯಕ್ರಮ ವಿಭಾಗದಿಂದ 2,00,305 ಶ್ರವಣ ದೋಷವುಳ್ಳವರನ್ನು, 35,418 ಗಂಭೀರ ದೋಷವುಳ್ಳವರನ್ನು ಗುರುತಿಸಲಾಗಿದೆ. 5 ವರ್ಷದೊಳಗಿನ 2,381 ಮಕ್ಕಳಲ್ಲೂ ಈ ಸಮಸ್ಯೆ ಕಾಣಿಸಿದೆ. ರಾಜ್ಯದೆಲ್ಲಾ ಇಎನ್‌ಟಿ ತಜ್ಞರ ಸಹಾಯದಿಂದ 10,213 ಶಸ್ತ್ರಚಿಕಿತ್ಸೆ ಹಾಗೂ 11,857 ಫಲಾನುಭವಿಗಳಿಗೆ ಶ್ರವಣ ಸಾಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.