ದಾವಣಗೆರೆ: ‘ಇ-ಸ್ಟೋರ್’ ಮಾಡಿಕೊಡುವುದಾಗಿ ಹೇಳಿ ಜನರಿಂದ ಹಣ ಸಂಗ್ರಹಿಸಿ 2 ಕೋಟಿ ರೂ.ಗಳಷ್ಟು ವಂಚಿಸಿದ ಪ್ರಕರಣ ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಗಳು ಕೆಲವರಿಂದ ಹಣ ಪಡೆದು ರಿಯಾಯಿತಿ ದರದಲ್ಲಿ ವಸ್ತುಗಳನ್ನು ನೀಡಿ ‘ಇ-ಸ್ಟೋರ್’ ಮಾಡಿಕೊಟ್ಟು ನಂಬಿಸಿದ್ದಾರೆ. ಕೆಲ ತಿಂಗಳ ನಂತರ ಇದೇ ರೀತಿ ಹಲವರಿಂದ ಹಣ ಪಡೆದು, ಅವರಿಗೆ ಅಂಗಡಿಯನ್ನೂ ತೆರೆಯದೆ, ವಸ್ತುಗಳನ್ನೂ ನೀಡದೆ ವಂಚಿಸಿದ್ದಾರೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದೇ ರೀತಿಯ ಪ್ರಕರಣ ಶಿವಮೊಗ್ಗ ಜಿಲ್ಲೆಯಲ್ಲೂ ಆಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್ ತಿಳಿಸಿದ್ದಾರೆ.