ಜಿಲ್ಲೆ

ಇ-ಕೆವೈಸಿಗೆ ದುಪ್ಪಟ್ಟು ಶುಲ್ಕ ವಸೂಲಿ

Udupi

- ಅವಿನ್ ಶೆಟ್ಟಿ ಉಡುಪಿ
ಖಾಸಗಿ ಸೈಬರ್ ಸೆಂಟರ್‌ಗಳು ಪಡಿತರ ಇ-ಕೆವೈಸಿ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿ ಸಾರ್ವಜನಿಕರಿಂದ ದುಪ್ಪಟ್ಟು ಶುಲ್ಕ ಪಡೆದುಕೊಳ್ಳುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಪಡಿತರ ಇ-ಕೆವೈಸಿ ನೋಂದಣಿ, ಒಟಿಪಿ ಜನರೇಟ್ ಮಾಡದಂತೆ ಖಾಸಗಿ ಸೈಬರ್ ಸೆಂಟರ್ ಮಾಲೀಕರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಗೂ ಕಡ್ಡಾಯವಾಗಿ ಪಡಿತರ ವಿತರಣಾ ಕೇಂದ್ರಗಳಲ್ಲಿಯೇ ಇ-ಕೆವೈಸಿ ನೋಂದಣಿ ಮಾಡುವಂತೆ ಸೂಚಿಸಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ರೇಷನ್ ಕಾರ್ಡ್‌ಗೆ ಇ-ಕೆವೈಸಿ ನೋಂದಣಿ ಮಾಡಿಸಲು ಸೊಸೈಟಿಗಳಲ್ಲಿ ನೂಕು ನುಗ್ಗಲು ಏರ್ಪಟ್ಟಿತ್ತು. ಸಾರ್ವಜನಿಕರು ಕೆಲಸ ಕಾರ್ಯ ಬಿಟ್ಟು ಇ-ಕೆವೈಸಿ ನೀಡಲು ಅಲೆಯಬೇಕಾಗಿರುವುದು ಗ್ರಾಮೀಣ ಜನರನ್ನು ಹೈರಾಣಾಗಿಸಿತ್ತು. ಇದನ್ನೇ ಲಾಭ ಮಾಡಿಕೊಳ್ಳಲು ಯತ್ನಿಸಿದ ಕೆಲವು ಸೈಬರ್ ಸೆಂಟರ್ ಮಾಲೀಕರು ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಇಲಾಖೆ ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡಿದ್ದಾರೆ. ರಾಜ್ಯಾದ್ಯಂತ ಸಮಸ್ಯೆ ಇದ್ದು, ರಾಜ್ಯಮಟ್ಟದ ಇಲಾಖೆ ಹಿರಿಯ ಅಧಿಕಾರಿಗಳು ಎಲ್ಲ ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಖಡಕ್ ಸೂಚನೆ ರವಾನಿಸಿದ್ದಾರೆ.

ಮುಕ್ತ ವೆಬ್‌ತಾಣ ಸಮಸ್ಯೆಗೆ ಕಾರಣ: ಇ-ಕೆವೈಸಿ ನೋಂದಣಿ ಪ್ರಕ್ರಿಯೆ ಮಾಡುವ ವೆಬ್‌ತಾಣವನ್ನು ಓಪನ್‌ಸೈಟ್ (ಮುಕ್ತ ವೆಬ್‌ತಾಣ) ಆಗಿ ಪರಿವರ್ತಿಸಲಾಗಿದೆ. ಇದರಲ್ಲಿ ಹೊಸ ಅರ್ಜಿ, ತಿದ್ದುಪಡಿ, ಇ-ಕೆವೈಸಿ ನೋಂದಣಿ ವ್ಯವಸ್ಥೆ ಇದೆ. ಸೊಸೈಟಿಗಳಲ್ಲಿ, ಇಲಾಖೆ ಸಿಬ್ಬಂದಿ, ಸಾರ್ವಜನಿಕರು, ಸೈಬರ್ ಸೆಂಟರ್‌ಗಳಲ್ಲಿ ಈ ವೆಬ್‌ತಾಣವನ್ನು ಸುಲಭವಾಗಿ ತೆರೆದು ಬಳಕೆ ಮಾಡಬಹುದು. ಇದನ್ನು ಸೊಸೈಟಿಗಳಿಗೆ ಮತ್ತು ಇಲಾಖೆಗೆ ಮಾತ್ರ ಮುಕ್ತವಾಗಿಸಿದ್ದರೆ ಸಮಸ್ಯೆ ಇರುತ್ತಿರಲಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಸರ್ಕಾರದಿಂದ ಹಣ ಪಾವತಿ: ಪಡಿತರ ಚೀಟಿ ಇ-ಕೆವೈಸಿ ನೋಂದಣಿ ಮಾಡುವ ಪ್ರಕ್ರಿಯೆಗೆ ನ್ಯಾಯಬೆಲೆ ಅಂಗಡಿ/ ಸೊಸೈಟಿಗಳಿಗೆ ಸರ್ಕಾರವೇ ಹಣ ಪಾವತಿಸುತ್ತದೆ. ಪ್ರತಿಯೊಂದು ಕಾರ್ಡ್‌ಗೆ ತಲಾ 50 ರೂಪಾಯಿಯಂತೆ ಪ್ರಕ್ರಿಯೆ ಮುಗಿದ ಬಳಿಕ ಸರ್ಕಾರ ಹಣ ನೀಡುತ್ತದೆ. ಸೊಸೈಟಿಗಳಲ್ಲಿ ಉಚಿತ ಸೌಲಭ್ಯ ಇರುವಾಗ ಸೈಬರ್ ಸೆಂಟರ್‌ಗೆ ಹೋಗುವ ಅಗತ್ಯವಿಲ್ಲ. ಸೈಬರ್ ಸೆಂಟರ್‌ಗಳಲ್ಲಿ 200, 300 ರೂ. ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಪಿ ಅಡ್ರೆಸ್ ಪತ್ತೆ ಮಾಡಿ ಕ್ರಮ: ಸೈಬರ್ ಸೆಂಟರ್‌ಗಳಲ್ಲಿ ಪಡಿತರ ಚೀಟಿಗೆ ಸಂಬಂಧಿಸಿ ಇ-ಕೆವೈಸಿ ನೋಂದಣಿ ಪ್ರಕ್ರಿಯೆ ಮಾಡಲು ಅವಕಾಶವಿಲ್ಲ. ಈ ಬಗ್ಗೆ ಸೂಕ್ತ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ. ಸಂಬಂಧಪಟ್ಟ ಇಲಾಖೆ ನೆರವು ಪಡೆದು ಐಪಿ ಅಡ್ರೆಸ್ ಪತ್ತೆ ಮಾಡುವ ಮೂಲಕ ಇತರೆ ಸೇವೆಗಳನ್ನು ಅಜೀವ ಬ್ಲಾಕ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇನ್ನೂ ಇ-ಕೈವೈಸಿ ಆರಂಭವಾಗಿಲ್ಲ: ಇ-ಕೆವೈಸಿ ಪ್ರಕ್ರಿಯೆ ನೋಂದಣಿ ತಾಂತ್ರಿಕ ಸಮಸ್ಯೆಯಿಂದ ಸರ್ವರ್ ಡೌನ್ ಆಗಿ ಪ್ರಕ್ರಿಯೆ ವಿಳಂಬವಾದ ಬಳಿಕ ಜ.20ವರೆಗೆ ಸ್ಥಗಿತಗೊಳಿಸಲಾಗಿತ್ತು. ಆದರೆ ಇನ್ನೂ ನೋಂದಣಿ ಪ್ರಕ್ರಿಯೆ ಆರಂಭಗೊಂಡಿಲ್ಲ. ಜನವರಿ ತಿಂಗಳಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ವಿಳಂಬವಾದ ಹಿನ್ನೆಲೆಯಲ್ಲಿ ಪಡಿತರ ವಿತರಣೆ ಬಳಿಕ ಶೀಘ್ರ ನೋಂದಣಿ ಪ್ರಕ್ರಿಯೆ ಆರಂಭಿಸುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.

ರೇಷನ್ ಕಾರ್ಡ್ ಇ-ಕೆವೈಸಿ ನೋಂದಣಿಗೆ ಕುಟುಂಬದ ಎಲ್ಲ ಸದಸ್ಯರು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗೆ ತೆರಳಿ ನೋಂದಣಿ ಮಾಡಿಸಬೇಕು. ಸದ್ಯ ತಾಂತ್ರಿಕ ಕಾರಣಗಳಿಂದ ನೋಂದಣಿ ಇನ್ನೂ ಆರಂಭವಾಗಿಲ್ಲ. ಶೀಘ್ರ ಈ ಬಗ್ಗೆ ಇಲಾಖೆ ಪ್ರಕಟಣೆ ನೀಡಲಿದೆ.
- ಬಿ.ಕೆ ಕುಸುಮಾಧರ, ಉಪ ನಿರ್ದೇಶಕ (ಪ್ರಭಾರ), ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ