ಮಂಡ್ಯ: ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿರುವ ರೈತರ ಅಧಾರ್‌ಸಂಖ್ಯೆ ಪಡೆದು ಲಿಂಕ್ ಮಾಡುವ ಇ-ಕೆವೈಸಿ ಕೆಲಸವನ್ನು ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಂದಾಯ ಮತ್ತು ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 65 ಸಾವಿರ ರೈತರು ಇ-ಕೆವೈಸಿಗೆ ನೋಂದಾಯಿಸಿಕೊಂಡಿಲ್ಲ. ಹಾಗಾಗಿ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆಯುವ ಕೆಲಸ ಮಾಡುತ್ತಾರೆ. ರೈತರು ತಮ್ಮ ಆಧಾರ್ ಸಂಖ್ಯೆಯನ್ನು ನೀಡಿ ಅಧಿಕಾರಿಗಳಿಗೆ ಸಹಕರಿಸಿ ಎಂದರು.
ಮುಂದಿನ 10 ದಿನದಲ್ಲಿ ಜಿಲ್ಲೆಯ ಎಲ್ಲ ರೈತರ ಆಧಾರ್ ಸಂಖ್ಯೆಯನ್ನು ಯೋಜನೆಗೆ ಲಿಂಕ್ ಮಾಡುವ ಗುರಿ ನಿಗದಿಪಡಿಸಿದ್ದು, ಅದರಂತೆ ನಡೆಯಲಿದೆ. ಇದನ್ನು ಯಶಸ್ವಿಗೊಳಿಸಲು ರೈತರು ಸಹಕರಿಸಬೇಕು ಎಂದ ಅವರು, ಆರ್.ಟಿ.ಸಿ ತಿದ್ದುಪಡಿ, ಕಂದಾಯ ಇಲಾಖೆಯ ನ್ಯಾಯಾಲಯ ಸೇರಿದಂತೆ ವಿವಿಧ ಇಲಾಖೆಯ ಬಗ್ಗೆ ಪ್ರಗತಿ ಬಗ್ಗೆ ಮಾಹಿತಿ ಪಡೆದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಂಟಿ ಕೃಷಿ ನಿರ್ದೇಶಕ ವಿ.ಅಶೋಕ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಮದ್ದೂರು ತಹಸೀಲ್ದಾರ್ ನರಸಿಂಹಮೂರ್ತಿ ಇತರರಿದ್ದರು.