ಮಹಾಲಿಂಗಪುರ: ಇ-ಖಾತಾ ನೋಂದಣಿಮಾಡದ ಪಟ್ಟಣದ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಆದೇಶದಂತೆ ಜು. 30 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಪುರಸಭೆಗೆ ಆಗಮಿಸಿ ಆಸ್ತಿಗಳನ್ನು ನೋಂದಣಿ ಮಾಡಿಕೊಂಡು ಇ-ಖಾತಾ ಉತಾರಗಳನ್ನು ಪಡೆದುಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ ಹೇಳಿದರು.
ಸ್ಥಳೀಯ ಪುರಸಭೆ ವತಿಯಿಂದ ಪಟ್ಟಣದ ಬಸವನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಇ-ಆಸ್ತಿ ನೋಂದಣೆ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ ಮಹಾಲಿಂಗಪುರ ಪುರಸಭೆಯಲ್ಲಿ 2741 ಅಧಿಕತ (ಎ ಖಾತಾ), 1149 ಅನಧಿಕತ (ಬಿ ಖಾತಾ) ಸೇರಿದಂತೆ 3890 ಸಾರ್ವಜನಿಕರು ಇ-ಖಾತಾ ನೋಂದಣಿ ಮಾಡಿಕೊಂಡು ಉತಾರಗಳನ್ನು ಪಡೆದುಕೊಂಡಿದ್ದಾರೆ ಎಂದರು.
ಪುರಸಭೆ ಕಂದಾಯ ಅಧಿಕಾರಿ ಪಿ.ವೈ. ಸೊನ್ನದ ಮಾತನಾಡಿ, ಜಿಲ್ಲೆಯಾದ್ಯಂತ ನಡೆದ ಇ-ಖಾತಾ ಅಭಿಯಾನದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜನ ಸಾರ್ವಜನಿಕರು ಮಹಾಲಿಂಗಪುರ ಪುರಸಭೆಯಲ್ಲಿ ಆಸ್ತಿಗಳನ್ನು ನೊಂದಣಿ ಮಾಡಿ ಇ-ಖಾತೆಯ ಉತಾರ ಪಡೆದುಕೊಂಡಿದ್ದಾರೆ. ಒಂದೇ ದಿನ 279 ಜನ ಅಂದರೆ ಅತಿಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದು ಸ್ವಾಗತಾರ್ಹ. ಇಂದು ನೋಂದಣಿಯಾದ ಯಾವುದೇ ಫೈಲ್‌ಗಳು ಪೆಂಡಿಂಗ್ ಉಳಿದಿಲ್ಲ ಎಂದರು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಸದಸ್ಯರಾದ ಮುಸ್ತಾಕ ಚಿಕ್ಕೋಡಿ, ಸವಿತಾ ಹುರಕಡ್ಲಿ, ಚಾಂದನಿ ನಾಯಕ, ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ, ವ್ಯವಸ್ಥಾಪಕ ಎಸ್.ಎನ್. ಪಾಟೀಲ, ಎಂ.ಕೆ. ದಳವಾಯಿ, ಎಸ್.ಬಿ. ಚೌಧರಿ, ಎಸ್.ಜಿ. ಕತ್ತಿ, ದುರ್ಗಪ್ಪ ಜಮಖಂಡಿ, ಈರಣ್ಣ ಕೊಪ್ಪದ, ಪ್ರಕಾಶ ಕಟಾಂವಿ, ಪರಶುರಾಮ ಬಂಡಿವಡ್ಡರ, ರವಿ ಹಲಸಪ್ಪಗೋಳ, ರಾಮು ಮಾಂಗ ಹಲವರು ಇದ್ದರು.