ಯಲ್ಲಾಪುರ; ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇ ಖಾತಾ ಅಭಿಯಾನಕ್ಕೆ ಸೋಮವಾರ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಶಾಸಕ ಶಿವರಾಮ ಹೆಬ್ಬಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮನೆ ಕಟ್ಟಿ ಆಧಾರ ಇಲ್ಲದ ಡೋಲಾಯಮಾನ ಪರಿಸ್ಥಿತಿಯಲ್ಲಿ ಅವುಗಳಿಗೆ ವಿದಾಯ ಹೇಳುವ ಮಹತ್ವದ ಕಾರ್ಯಕ್ರಮ ಇದಾಗಿದೆ. ಜಿಲ್ಲೆಯಲ್ಲಿ ಎರಡು ಲಕ್ಷ ಇಂತಹ ಮನೆಗಳಿದ್ದು, ಮೂರು ತಿಂಗಳೊಳಗೆ ಅಧಿಕೃತ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲೂ ಇ- ಖಾತಾ ನೀಡುವ ಪ್ರಸ್ತಾವನೆ ಬಜೆಟ್ನಲ್ಲಿ ಪ್ರಸ್ತಾಪವಾಗಿದೆ ಎಂದರು.
ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ. ಭಟ್ಟ ಮಾತನಾಡಿ, ಇದು ಸರ್ಕಾರದ ಉತ್ತಮ ಯೋಜನೆಯಾಗಿದ್ದು, ಸಮಸ್ಯೆ ಅನುಭವಿಸುತ್ತಿರುವ ಸಾವಿರಾರು ಜನರಿಗೆ ಹಕ್ಕು ನೀಡುವ ಮೂಲಕ ಅನುಕೂಲ ತಂದಿದೆ. ಆಸ್ತಿ ಮಾಲೀಕರಿಗೆ ಹಕ್ಕಿನ ಜತೆಗೆ ಸೌಲಭ್ಯಗಳು ದೊರೆಯುತ್ತದೆ ಎಂದರು.
ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಸದಾನಂದ ಭಟ್ಟ, ಪಪಂ ಉಪಾಧ್ಯಕ್ಷ ಅಮಿತ ಅಂಗಡಿ, ಮುಖ್ಯಾಧಿಕಾರಿ ಸುನೀಲ ಗಾವಡೆ ಭಾಗವಹಿಸಿದ್ದರು. ಪಪಂ ಸಮುದಾಯ ಸಂಘಟಕಿ ಹೇಮಾವತಿ ಭಟ್ಟ ನಿರ್ವಹಿಸಿದರು.