ಜಿಲ್ಲೆ

ಗ್ರಾಮೀಣ ಭಾಗಕ್ಕೂ ಇ-ಕಾಮರ್ಸ್ ಸೇವೆ ತಲುಪಲಿ: ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿಕೆ

ಹರೀಶ್​​ ಕೆ.ಸಿ.

ಬೆಂಗಳೂರು: ಎಲ್ಲ ಕೆಲಸವನ್ನೂ ಸರ್ಕಾರಗಳು ಮಾಡಲಾಗುವುದಿಲ್ಲ. ಖಾಸಗಿಕರಣದಿಂದ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಚೇತನಕ್ಕೆ ಸಾಧ್ಯವಾಗಲಿದೆ ಎಂದು ತುಮಕೂರಿನ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.

ದೇಶದ ಮೊದಲ ಇ-ಕಾಮರ್ಸ್ ಅಫಿಲಿಯೇಟೆಡ್ ಸಂಸ್ಥೆಯಾದ ಸ್ಮಾರ್ಟ್ ಕ್ವಿಕ್, ಭಾನುವಾರ ನಗರದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ, ನಗರ ಮಾತ್ರವಲ್ಲದೆ ಗ್ರಾಮೀಣ ಭಾಗಗಳಿಗೂ ಇ-ಕಾಮರ್ಸ್ ಸೇವೆ ತಲುಪಬೇಕು. ಇದರಿಂದ ಗ್ರಾಮೀಣ ಮಕ್ಕಳಿಗೆ ಉದ್ಯೋಗ, ಆರ್ಥಿಕ ಸ್ವಾವಲಂಬನೆ ದೊರೆಯುತ್ತದೆ ಶ್ರೀಗಳು ಹೇಳಿದರು.

ಸ್ಮಾರ್ಟ್ ಕ್ವಿಕ್ ಸಂಸ್ಥಾಪಕ ದೀಪುಗೌಡ ಮಾತನಾಡಿ, ಇ-ಕಾಮರ್ಸ್ ಉದ್ಯಮವು ನಿರುದ್ಯೋಗ ನಿವಾರಣೆ, ಆರ್ಥಿಕ ಸ್ವಾವಲಂಬನೆ ಹಾಗೂ ಸ್ವಯಂ ಉದ್ಯೋಗಕ್ಕೆ ದೊಡ್ಡ ವೇದಿಕೆಯಾಗಿದೆ. ನಮ್ಮ ಸಂಸ್ಥೆಯು ಬರೀ ಒಂದು ವರ್ಷದಲ್ಲಿ ಲಕ್ಷಾಂತರ ಗ್ರಾಹಕರ ವಿಶ್ವಾಸ ಗಳಿಸಿದೆ.ಸಾವಿರಾರು ಯುವಕರಿಗೆ ಉದ್ಯೋಗ ಕೊಟ್ಟಿದೆ. ಸೂಪರ್ ಮಾರ್ಕೆಟ್ ಆರಂಭಿಸಿದ್ದು, ಮುಂದಿನ 6 ತಿಂಗಳಲ್ಲಿ 10ಕ್ಕೂ ಅಧಿಕ ಶಾಖೆಗಳನ್ನು ಜೈಪುರ ಸೇರಿ ದೇಶದ ಹಲವು ನಗರಗಳಲ್ಲಿ ತೆರೆಯಲು ಗುರಿ ಹಾಕಿಕೊಂಡಿದ್ದೇವೆ ಎಂದರು.

ಇದೇ ವೇಳೆ ಸಂಸ್ಥೆ ಆನ್‌ಲೈನ್ ಮತ್ತು ಆಫ್‌ಲೈನ್ ಗ್ರಾಹಕರಿಗೆ ಖರೀದಿ ಅವಕಾಶವನ್ನು ಒದಗಿಸಿದೆ. ಖರೀದಿಸಿದ ವಸ್ತುಗಳಿಗೆ ಕ್ಯಾಶ್‌ಬ್ಯಾಕ್ ಸೌಲಭ್ಯ ಕಲ್ಪಿಸಿದೆ. ಇದರಿಂದ ಕಡಿಮೆ ದರದಲ್ಲಿ ವಸ್ತುಗಳನ್ನು ಗ್ರಾಹಕರು ಖರೀದಿಸಿದರು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಚ್ಚಲಾನಂದನಾಥ ಸ್ವಾಮೀಜಿ, ಬೇಲಿ ಮಠದ ಶ್ರೀ ಶಿವರುದ್ರಸ್ವಾಮೀಜಿ, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿಯ ಡಾ. ಎಂ. ನವೀನ್ ಕುಮಾರ್ ಮತ್ತು ಒಕ್ಕಲಿಗರ ಯುವ ಬ್ರಿಗೇಡ್ ಅಧ್ಯಕ್ಷ ನಂಜೇಗೌಡ ನಂಜುಂಡ ಮತ್ತಿತರರಿದ್ದರು.