ಜಿಲ್ಲೆ

ಕೊಡಗಿಗೂ ಬರುತ್ತದೆ ಇ ಬಸ್ !

reportermys

ಮಡಿಕೇರಿ:
ಈ ತಿಂಗಳಾಂತ್ಯಕ್ಕೆ ಬೆಂಗಳೂರಿನಿಂದ ಕೊಡಗಿಗೂ ಇ ಬಸ್‌ಗಳು ಸಂಚಾರ ಆರಂಭಿಸಲಿವೆ. ಮಡಿಕೇರಿ ಮತ್ತು ವಿರಾಜಪೇಟೆಗೆ ’ಇವಿ ಪವರ್ ಪ್ಲಸ್ ಎಸಿ ಬಸ್’ಗಳಲ್ಲಿ ಓಡಾಡಬಹುದಾಗಿ. ಈ ಸಂಬಂಧ ಈ ಎರಡೂ ಸ್ಥಳಗಳಲ್ಲೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.

ಜನವರಿಯಿಂದ ಬೆಂಗಳೂರು ಮತ್ತು ಮೈಸೂರು ಮಧ್ಯೆ ಸಂಚರಿಸುತ್ತ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಇ ಬಸ್‌ಗಳ ಸೇವೆ ಮಾರ್ಚ್ ಕೊನೆಗೆ ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆಗೂ ವಿಸ್ತರಣೆ ಆಗಲಿದೆ. ಹಲವು ಹೊಸತನಗಳನ್ನು ಪರಿಚಯಿಸುವ ಮೂಲಕ ದೇಶದಲ್ಲೇ ಮಾದರಿ ಅನ್ನಿಸಿಕೊಂಡಿರುವ ಕೆಎಸ್‌ಆರ್‌ಟಿಸಿ ಇದೀಗ ಕೊಡಗು ಸೇರಿದಂತೆ ೫ ಜಿಲ್ಲೆಗಳಿಗೆ ಬೆಂಗಳೂರಿನಿಂದ ಇ-ಬಸ್‌ಗಳ ಸಂಚಾರ ವ್ಯವಸ್ಥೆ ಕಲ್ಪಿಸುತ್ತಿದೆ. ಇದಕ್ಕಾಗಿ ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ಚಾರ್ಜಿಂಗ್ ಸ್ಟೇಷನ್ ಸೇರಿದಂತೆ ಮೂಲಭೂತ ಸೌಕರ್ಯ ನಿರ್ಮಿಸುವ ಕೆಲಸ ಬಹುತೇಕ ಅಂತಿಮ ಹಂತದಲ್ಲಿದೆ.

ಇ-ಬಸ್‌ಗಳನ್ನು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು ೨೫೦-೩೦೦ ಕಿಮೀ ಸಂಚರಿಸಲಿದೆ. ಬೆಂಗಳೂರಿನಿಂದ ಇಷ್ಟು ಅಂತರದಲ್ಲಿರುವ ಕೆಎಸ್‌ಆರ್‌ಟಿಯ ಜನಪ್ರಿಯ ಮಾರ್ಗಗಳಲ್ಲಿ ಇಂತಹ ಬಸ್‌ಗಳನ್ನು ಓಡಿಸಲು ಸಂಸ್ಥೆ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವೇಳೆ ಲಕ್ಷ್ಮಣ ಸವದಿ ಸಾರಿಗೆ ಸಚಿವರಾಗಿದ್ದಾಗ ಕೆಎಸ್‌ಆರ್‌ಟಿಸಿ ವತಿಯಿಂದ ಎಲೆಕ್ಟ್ರಿಕ್ ಬಸ್‌ಗಳ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ನಂತರ ಬಸ್‌ಗಳ ಪೂರೈಕೆಗಾಗಿ ಟೆಂಡರ್ ನೀಡಲಾಗಿತ್ತು. ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆ ಸಂಸ್ಥೆ ಒಟ್ಟು ೫೦ ಇ-ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ಪೂರೈಸುತ್ತಿದೆ.

ಚಾರ್ಜ್ ಆಗಿರುವ ಬ್ಯಾಟರಿಗಳ ಶಕ್ತಿಯಿಂದ ಇ-ಬಸ್‌ಗಳು ಸಂಚರಿಸುವುದರಿಂದ ಬೆಂಗಳೂರಿನ ಮೆಜೆಸ್ಟಿಕ್ ಬಸ್ ಟರ್ಮಿನಲ್ ಮತ್ತು ಮೈಸೂರು ಬಸ್ ನಿಲ್ದಾಣದಲ್ಲಿ ಈಗಾಗಲೇ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಇ-ಬಸ್‌ಗಳು ಬೆಂಗಳೂರಿನಿಂದ ಸಂಚಾರ ಆರಂಭಿಸಲಿರುವ ವಿರಾಜಪೇಟೆ, ಮಡಿಕೇರಿ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಡಿಪೋಗಳಲ್ಲೂ ಚಾರ್ಜಿಂಗ್ ಕೇಂದ್ರಗಳನ್ನು ಅಳವಡಿಸುವ ಕೆಲಸ ಭದಿಂದ ನಡೆದಿದೆ.

ಇ-ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ಪೂರೈಸುವ ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆಯೇ ಇ-ಬಸ್‌ಗಳನ್ನು ನಿರ್ವಹಣೆ ಮಾಡಲಿದೆ. ಚಾಲಕರನ್ನು ಸಂಸ್ಥೆಯೇ ನೇಮಕ ಮಾಡಿಕೊಳ್ಳುತ್ತದೆ. ಕೆಎಸ್‌ಆರ್‌ಟಿಸಿ ನಿರ್ವಾಹಕ ಕಾರ್ಯನಿರ್ವಹಿಸಲಿದ್ದಾರೆ. ನಿರ್ವಹಣಾ ವೆಚ್ಚವಾಗಿ ಪ್ರತಿ ಕಿಮೀಗೂ ೫೫ ರೂ.ಗಳನ್ನು ಈ ಸಂಸ್ಥೆಗೆ ಕೆ.ಎಸ್.ಆರ್.ಟಿ.ಸಿ. ನೀಡಲಿದೆ. ಹಾಲಿ ಸಂಚರಿಸುತ್ತಿರುವ ಓಲ್ವೋ ಬಸ್‌ಗಳಿಗೆ ಹೋಲಿಸಿದರೆ ಇದು ೧೫ ರೂ.ಗಳಷ್ಟು ಕಡಿಮೆ ಆಗಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು. ಇದರಿಂದಾಗಿ ಬಸ್‌ಗಳ ನಿರ್ವಹಣಾ ವೆಚ್ಚದಲ್ಲಿ ಇಳಿಕೆ ಕಾಣುವುದರ ಜೊತೆಗೆ ದಹನಶೀಲ ಇಂಧನಗಳಿಂದಾಗುತ್ತಿದ್ದ ಪರಿಸರ ಮಾಲಿನ್ಯಕ್ಕೂ ಕಡಿವಾಣ ಹಾಕಿದಂತಾಗುತ್ತದೆ.

ಮುಂದಿನ ದಿನಗಳಲ್ಲಿ ಮತ್ತೆ ೩೫೦ ಇ ಬಸ್‌ಗಳನ್ನು ಸೇರ್ಪಡೆಗೊಳಿಸಲು ಕೆಎಸ್‌ಆರ್‌ಟಿಸಿ ಚಿಂತನೆ ನಡೆಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಳ ಮತ್ತು ದುಬಾರಿಯಾಗಿರುವ ಡೀಸೆಲ್‌ನಿಂದಾಗಿ ಬಸ್‌ಗಳ ನಿರ್ವಹಣೆಗೆ ಪರದಾಡುತ್ತಿರುವ ಕೆಎಸ್‌ಆರ್‌ಟಿಸಿಗೆ ಇ-ಬಸ್‌ಗಳು ಸಂಜೀವಿನಿ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಇರುವ ಸಂಸ್ಥೆಯ ಅಧಿಕಾರಿಗಳು ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆಯ ಆಶಾಭಾವನೆ ಹೊಂದಿದ್ದಾರೆ.

ಮಡಿಕೇರಿ ಕಡೆಗೆ ೭ ಮತ್ತು ವಿರಾಜಪೇಟೆಗೆ ೫ ಬಸ್‌ಗಳನ್ನು ಓಡಿಸಲು ಕೆ.ಎಸ್.ಆರ್.ಟಿ.ಸಿ. ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಒಟ್ಟು ೫ ಜಿಲ್ಲೆಗಳ ೬ ನಗರಗಳ ಮಧ್ಯೆ ಓಡಾಡುವ ಕೆಎಸ್‌ಆರ್‌ಟಿ ಇ-ಬಸ್ ೧೨ ಮೀಟರ್ ಉದ್ದವಿದೆ. ಇದು ಸಂಪೂರ್ಣ ಹವಾನಿಯಂತ್ರಿತ ಬಸ್. ಇದರಲ್ಲಿ ೪೩ ಸೀಟುಗಳು ಇದೆ. ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ ೨೫೦ ರಿಂದ ೩೦೦ ಕಿ. ಮೀ. ತನಕ ಸಂಚರಿಸಲಿದೆ. ಪ್ರತಿ ಕಿ.ಮೀ. ಸಂಚಾರಕ್ಕೆ ೧.೨ ಕಿಲೋ ವ್ಯಾಟ್? ವಿದ್ಯುತ್ ಬಳಕೆಯಾಗುತ್ತದೆ. ಇ-ಬಸ್‌ಗಳ ಸಂಚಾರಕ್ಕೆ ಬೆಂಗಳೂರು ನಗರ ಮತ್ತು ಮೈಸೂರು, ಬೆಂಗಳೂರು ಮಾರ್ಗದಲ್ಲಿ ಪ್ರಯಾಣಿಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕೊಡಗಿನಲ್ಲಿ ಮಡಿಕೇರಿ ಮತ್ತು ವಿರಾಜಪೇಟೆಗೆ ಇ-ಬಸ್‌ಗಳ ಸಂಚಾರ ಸೇವೆ ಸಿಗಲಿದೆ. ಬಹುತೇಕ ಈ ಮಾಸಾಂತ್ಯಕ್ಕೆ ಸಂಚಾರ ಆರಂಭಿಸುವುದಕ್ಕೆ ಬೇಕಿರುವ ಸಿದ್ಧತೆ ನಡೆಸಲಾಗಿದೆ. ಮಡಿಖೇರಿ ಡಿಪೋ ಮತ್ತು ವಿರಾಜಪೇಟೆ ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸುವ ಕೆಲಸ ಅಂತಿಮ ಹಂತ ತಲುಪಿದೆ.

  • ಗೀತಾ, ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋ