ಅಶೋಕ ಶೆಟ್ಟರ, ಬಾಗಲಕೋಟೆ:
ಕಾವೇರಿ-೨ ತಂತ್ರಾಂಶದ ಮೂಲಕ ಇ-ಆಸ್ತಿ ಖಾತಾ ಮಾಡಿಸಲು ನವನಗರದ ಬಿಟಿಡಿಎಯಿಂದ ನಿವೇಶನ ಪಡೆದಿದ್ದ ಸಂತ್ರಸ್ತರಿಗೆ ಉಂಟಾಗಿದ್ದ ತಾಂತ್ರಿಕ ಸಮಸ್ಯೆ ನಿವಾರಣೆ ಆಗಿದ್ದು, ಇನ್ನು ಎರಡ್ಮೂರು ದಿನಗಳಲ್ಲಿ ನೋಂದಣಿ ಕಾರ್ಯ ಆರಂಭವಾಗುವ ಸಾಧ್ಯತೆ ಇದೆ.
ಈ ಬಗ್ಗೆ ಪ್ರಾಯೋಗಿಕವಾಗಿ ಮಂಗಳವಾರ ಇಲ್ಲವೇ ಬುಧವಾರ ದಿನ ಒಂದು ಆಸ್ತಿಯನ್ನು ಇ-ಆಸ್ತಿ ಖಾತಾ ಮಾಡಿಸಲಿದ್ದು, ಆದಾದ ಬಳಿಕ ಸಾರ್ವಜನಿಕರು ಸಿಟಿಜನ್ ಲಾಗಿನ್ ಮೂಲಕ ದಾಖಲೆಗಳನ್ನು ಅಪ್ ಲೋಡ್ ಮಾಡಿ ಬಿಟಿಡಿಎಯಿಂದ ಪರಿಶೀಲನೆಯಾದ ಬಳಿಕ ಇ-ಆಸ್ತಿ ಖಾತಾ ಮಾಡಿಸಿಕೊಳ್ಳಬಹುದಾಗಿದೆ.
ರಾಜ್ಯ ಸರ್ಕಾರ ಇ-ಆಸ್ತಿ ನೋಂದಣಿಗೆ ಬಾಗಲಕೋಟೆ ಜಿಲ್ಲೆ ಸೇರಿ ಕೆಲ ಜಿಲ್ಲೆಗಳಲ್ಲಿ ಕಾವೇರಿ-೨ ತಂತ್ರಾಂಶವನ್ನು ಜಾರಿಗೊಳಿಸಿದ ಬಳಿಕ ಮುಖ್ಯವಾಗಿ ಬಾಗಲಕೋಟೆ ನವನಗರದ ಸಂತ್ರಸ್ತರಿಗೆ ಇ-ಆಸ್ತಿ ನೋಂದಣಿಗೆ ಸಂಕಷ್ಟ ಎದುರಾಗಿತ್ತು. ಇದರಿಂದ ಕಳೆದ ಒಂದು ತಿಂಗಳಿಂದ ನವನಗರದ ಆಸ್ತಿಗಳಿಗೆ ಸಂಬಂಽಸಿದಂತೆ ನೋಂದಣಿ ಕಾರ್ಯವೇ ಬಂದ್ ಆಗಿತ್ತು.
ಆಲಮಟ್ಟಿ ಜಲಾಶಯದ ಹಿನ್ನೀರು ವ್ಯಾಪ್ತಿಗೆ ಮುಳುಗಡೆ ಆಗಿರುವ ಬಾಗಲಕೋಟೆ ಸಂತ್ರಸ್ತರಿಗೆ ಬಿಟಿಡಿಎ ವತಿಯಿಂದ ನಿವೇಶನ ಹಂಚಿಕೆ ಮಾಡಲಾಗಿದೆ. ಯುನಿಟ್ ೧ ಹಾಗೂ ಯುನಿ೨ಟ್ ೨ ರಲ್ಲಿ ಅಂದಾಜು ೩೩ ಸಾವಿರ ನಿವೇಶನಗಳು ಹಂಚಿಕೆ ಆಗಬೇಕಿದೆ. ಇದರಲ್ಲಿ ಸಾಕಷ್ಟು ನಿವೇಶನಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದ್ದು, ಯುನಿಟ್-೨ರಲ್ಲಿ ಇನ್ನು ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ.
ನಿವೇಶನ ಹಂಚಿಕೆ, ಕಟ್ಟಡ ಪರವಾಣಿಗೆ ಸೇರಿದಂತೆ ಎಲ್ಲವನ್ನು ಪ್ರಾಽಕಾರವೇ ಮಾಡಿಕೊಂಡು ಬರುತ್ತಿದೆ. ಇದರಿಂದ ನವನಗರದ ಕಟ್ಟಡಗಳಿಗೆ ನಗರಸಭೆಯಿಂದ ಪಿಐಡಿ ಸಂಖ್ಯೆಯನ್ನಾಗಲಿ, ಖಾತಾವನ್ನು ಮಾಡಿಲ್ಲ. ಆದರೆ, ಕಾವೇರಿ-೨ ತಂತ್ರಾಂಶದಲ್ಲಿ ಇ-ಆಸ್ತಿ ನೋಂದಣಿಗೆ ಅವಕಾಶ ಆಗಿರಲಿಲ್ಲ.
ಇದೀಗ ಮುಳುಗಡೆ ಸಂತ್ರಸ್ತರಿಗೆ ಎದುರಾಗಿದ್ದ ತಾಂತ್ರಿಕ ಸಮಸ್ಯೆ ನಿವಾರಣೆ ಮಾಡಿ, ಇ-ಆಸ್ತಿ ಖಾತಾ ಮಾಡಿಸಿಕೊಳ್ಳಲು ಸಿದ್ದತೆ ಮಾಡಲಾಗಿದ್ದು, ಎರಡ್ಮೂರು ದಿನಗಳಲ್ಲಿ ನೋಂದಣಿ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾ ನೋಂದಣಿ ಅಽಕಾರಿ ಎಸ್.ಜಿ.ನ್ಯಾಮಗೌಡ ಅವರು ತಿಳಿಸಿದ್ದಾರೆ.
ಸಂತ್ರಸ್ತರಿಗೆ ಬಿಟಿಡಿಎ ವತಿಯಿಂದ ಈಗಾಗಲೇ ಹಕ್ಕು ಪತ್ರ ಕೊಡಲಾಗಿದೆ. ಅದನ್ನು ಲೀಜ್ ಕಂ ಸೇಲ್ ನೋಂದಣಿ ಮಾಡಿಸಿದ್ದು, ಇದೀಗ ನಿವೇಶನ ಪಡೆದ ಸಂತ್ರಸ್ತರು ಸಿಟಿಜನ್ ಲಾಗಿನ್ ನಲ್ಲಿ ಹಕ್ಕು ಪತ್ರ, ಲೀಜ್ ಕಂ ಸೇಲ್ ಪ್ರಮಾಣ ಪತ್ರ, ಖರೀದಿ ಪತ್ರ, ಋಣಭಾರ ಪತ್ರದ ಜೊತೆಗೆ ಭಾವಚಿತ್ರ, ಆಧಾರ, ಪಾನ್ ಕಾರ್ಡ್ ಸೇರಿ ಅಗತ್ಯ ದಾಖಲೆಗಳನ್ನು ಹಾಕಭೇಕು. ಅದು ನೇರವಾಗಿ ಬಿಟಿಡಿಎ ಕಚೇರಿಯ ಶಿರಸ್ತೇದಾರಗೆ ಹೋಗುತ್ತದೆ. ಆ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಎಲ್ಲವೂ ಸರಿಯಾಗಿದ್ದರೆ ಅಲ್ಲಿಂದ ಮುಂದಿನ ಪ್ರಕ್ರಿಯೆ ನಡೆಯುತ್ತದೆ.
ಇಲ್ಲಿ ಅನೇಕ ಸಂತ್ರಸ್ತರು ಲೀಜ್ ಕಂ ಸೇಲ್ ನೋಂದಣಿ ಪ್ರಮಾಣ ಪತ್ರವನ್ನು ಬಿಟಿಡಿಎಗೆ ಸಲ್ಲಿಸಿಲ್ಲ. ಸಂತ್ರಸ್ತರು ಅದರ ಒಂದು ಪ್ರತಿಯನ್ನು ಬಿಟಿಡಿಎಗೆ ಸಲ್ಲಿಸಿದಲ್ಲಿ ಪರಿಶೀಲನೆಗೆ ಸುಲಭವಾಗಲಿದೆ. ಇದರಿಂದ ನೋಂದಣಿ ಕಾರ್ಯಕ್ಕೆ ಅನುಕೂಲವಾಗುತ್ತದೆ. ಈ ಬಗ್ಗೆ ಈಗಾಗಲೇ ಬಿಟಿಡಿಎ ಮುಖ್ಯ ಇಂಜನಿಯರ್ ಜೊತೆಗೆ ಚರ್ಚಿಸಲಾಗಿದೆ. ಇದರಿಂದ ತಾಂತ್ರಿಕ ಸಮಸ್ಯೆ ಬಗೆಹರಿಸಿದ್ದು, ಸದ್ಯ ಸಂತ್ರಸ್ತರಿಗೆ ಇ-ಆಸ್ತಿ ಖಾತಾ ಮಾಡಿಸಲು ಯಾವುದೇ ತೊಂದರೆ ಆಗಲ್ಲ ಎಂದು ಜಿಲ್ಲಾ ನೋಂದಣಿ ಅಽಕಾರಿ ಹೇಳುತ್ತಾರೆ.
ಹೊಸ ಹಂಚಿಕೆ ನಿವೇಶನಕ್ಕೆ ಸಮಸ್ಯೆ ಇಲ್ಲ :
ಯುನಿಟ್-೧ ಮತ್ತು ೨ ರಲ್ಲಿ ಈಗಾಗಲೇ ಹಂಚಿಕೆ ಮಾಡಿರುವ ನಿವೇಶನಗಳ ಮಾಲೀಕರು ಯಾರು ಎನ್ನುವುದು ಹಕ್ಕುಪತ್ರ, ಲೀಜ್ ಕಂ ಸೇಲ್ ನಲ್ಲಿ ಇದ್ದೆ ಇರುತ್ತದೆ. ಇನ್ನು ಹಂಚಿಕೆ ಆಗದೇ ಇರುವ ನಿವೇಶನಗಳು ಬಿಟಿಡಿಎ ಹೆಸರಿನಲ್ಲಿ ಇರುತ್ತವೆ. ಇರುವುದರಿಂದ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದಂತೆ ಬಿಟಿಡಿಎಯಿಂದ -Àಲಾನುಭವಿಗಳ ಹೆಸರಿಗೆ ಇ-ಆಸ್ತಿ ಖಾತಾ ಮಾಡಿಸಬಹುದು.
ಸಂತ್ರಸ್ತರ ನಿವೇಶನ ಹತ್ತು ವರ್ಷ ಖರೀದಿಗೆ ಅವಕಾಶವೇ ಇಲ್ಲ :
ಇನ್ನು ಯುನಿಟ್ ೧ ಹಾಗೂ ೨ರಲ್ಲಿ ನಿವೇಶನ ಪಡೆದ ಸಂತ್ರಸ್ತರು ಹತ್ತು ವರ್ಷಗಳ ವರೆಗೆ ಅದನ್ನು ಬೇರೆಯವರಿಗೆ ಮಾರಾಟ ಮಾಡಲು ಅವಕಾಶವೇ ಇಲ್ಲ. ಈ ಮಧ್ಯ ಕೆಲವರು ತಮ್ಮ ವೈಯಕ್ತಿಕ ಒಡಂಬಡಿಕೆ ಮಾಡಿಕೊಂಡಿದ್ದರೆ ಅದು ಅವರಿಗೆ ಬಿಟ್ಟ ವಿಚಾರ. ಅವುಗಳು ಖರೀದಿ ಪ್ರಕ್ರಿಯೆ ನಡೆಯಲ್ಲ. ಹತ್ತು ವರ್ಷ ಆದ ಬಳಿಕ ಖರೀದಿ ಮಾಡಿದ್ದು ಇದ್ದರೆ ಅದಕ್ಕೆ ಬಿಟಿಡಿಎಯಿಂದ ನಿರಾಪೇಕ್ಷಣ ಪತ್ರ ಪಡೆದು, ಖರೀದಿಗೆ ನೀಡಿದಲ್ಲಿ ಖರೀದಿ ಪತ್ರ ಪಡೆದು ಇ-ಆಸ್ತಿ ಖಾತಾ ನೋಂದಾಯಿಸಲಾಗುವುದು.. ಸಾರ್ವಜನಿಕರು ಈ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಅಽಕಾರಿಗಳು ಹೇಳುತ್ತಾರೆ.