ರೋಣ: ಸತತ ಒಂಬತ್ತು ಬಾರಿ ಸ್ಪರ್ಧಿಸುವ ಮೂಲಕ 78 ವರ್ಷದ ವೃದ್ಧ ಗ್ರಾಮ ಪಂಚಾಯಿತಿ ಚುನಾವಣೆಯ ಕಣ ರಂಗೇರಿಸಿದ್ದಾರೆ.
ಹೌದು. ರೋಣ ತಾಲೂಕಿನ ಸವಡಿ ಗ್ರಾಮದ 6ನೇ ವಾರ್ಡಿನಿಂದ ಸ್ಪರ್ಧಿಸಿರುವ ಬಸಪ್ಪ ಶಿವಮೂರ್ತೆಪ್ಪ ಮಂಗಳೂರ ಎಂಬುವವರು ಗಮನ ಸೆಳೆದ ಅಭ್ಯರ್ಥಿ. ಸತತ 7 ಬಾರಿ ವಿಜೇತರಾಗಿ ಕಳೆದ ಬಾರಿ ಪರಾಭವಗೊಂಡಿದ್ದಾರೆ. ಈಗ 9ನೇ ಬಾರಿಗೆ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗೊಡ್ಡಿದ್ದಾರೆ.
ಗ್ರಾಮದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸದಾ ಚಿಂತಿಸುವ ಬಸಪ್ಪನವರು ಗ್ರಾಮಸ್ಥರೊಂದಿಗೆ ಸೌಹಾರ್ದವಾಗಿ ಬದುಕು ನಡೆಸುತ್ತಿದ್ದಾರೆ. ಜನರ ಸಮಸ್ಯೆಗೆ ಸದಾ ತುಡಿವ ಇವರನ್ನು ಗ್ರಾಮದ ಜನತೆ 7 ಬಾರಿ ಗೆಲ್ಲಿಸಿದ್ದಾರೆ. ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಪ್ರತಿಯೊಂದು ಕಾಮಗಾರಿಗೂ ತಮ್ಮ ಕೊಡುಗೆ ನೀಡಿದ್ದಾರೆ.
ಸವಡಿ ಗ್ರಾಮಸ್ಥರಿಗೆ ಸರ್ಕಾರದ ಸೌಲಭ್ಯಗಳಾದ ಮಾಸಾಶನ, ಶಾಲಾ ಮಕ್ಕಳ ಜಾತಿ, ಆದಾಯ ಪ್ರಮಾಣಪತ್ರ ಕೊಡಿಸುವುದು ಸೇರಿದಂತೆ ಗ್ರಾಮದ ಮೂಲಸೌಲಭ್ಯಗಳಾದ ವಸತಿ, ಕುಡಿಯುವ ನೀರು, ಸ್ವಚ್ಛತೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತ ಇತರರಿಗೆ ಮಾದರಿಯಾಗಿದ್ದಾರೆ ಎಂದು ಗ್ರಾಮಸ್ಥರು ಹೆಮ್ಮೆಯಿಂದ ಹೇಳುತ್ತಾರೆ.
ಈ ಹಿಂದೆ ವ್ಯಕ್ತಿ ಹಾಗೂ ಅವರ ಸಮಾಜಪರ ಕೆಲಸಗಳನ್ನು ನೋಡಿ ಮತ ಹಾಕುತ್ತಿದ್ದರು. ಆದರೆ, ಈಗ ಜಾತಿ, ಹಣ, ಮದ್ಯದ ಆಮೀಷವೊಡ್ಡಿ ಮತ ಕೇಳುತ್ತಿರುವ ಈಗಿನ ಪರಿಸ್ಥಿತಿ ನೋಡಿದರೆ ಪಾಪ ಎನ್ನಿಸುತ್ತದೆ. ಸತತ 7 ಸಲ ಗ್ರಾಪಂಗೆ ಆಯ್ಕೆಯಾದರೂ ಒಂದೇ ಒಂದು ಪೈಸೆ ಪಡೆದಿಲ್ಲ. ವೈಯಕ್ತಿಕವಾಗಿ ಗ್ರಾಪಂನಿಂದ ಒಂದೇ ಒಂದು ಕೆಲಸ ಮಾಡಿಕೊಂಡಿಲ್ಲ. | ಬಸಪ್ಪ ಮಂಗಳೂರ ಸವಡಿ ಗ್ರಾಮದ 6ನೇ ವಾರ್ಡ್ ಅಭ್ಯರ್ಥಿ
ಬಸಪ್ಪನವರು ಐವತ್ತು ವರ್ಷಗಳಿಂದ ಪಕ್ಷಾತೀತವಾಗಿ ಗ್ರಾಮದ ಜನರ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲ ಸಮುದಾಯದ ಮತದಾರರು ಇವರನ್ನು ಬೆಂಬಲಿಸುತ್ತಿದ್ದಾರೆ. ಗ್ರಾಮದ ಸಂಗಮೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ ಹಾಗೂ ಕುಸ್ತಿ ಪಂದ್ಯಾವಳಿ ಆಯೋಜಿಸುತ್ತಾರೆ. ಅಲ್ಲದೆ, ಪ್ರತಿವರ್ಷ ಇವರ ನೇತೃತ್ವದಲ್ಲಿ ಸಾಮೂಹಿಕ ವಿವಾಹಗಳು ಜರುಗುತ್ತವೆ. | ನಿಂಗಪ್ಪ ಬಳಿಗಾರಗ್ರಾಮಸ್ಥ
EndFragment