ಜಿಲ್ಲೆ

ದೂರು ನೀಡಲು ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ DYSP! ಆಘಾತಕಾರಿ ವಿಡಿಯೋ ವೈರಲ್

ತುಮಕೂರು: ದೂರು ನೀಡಲು ಬಂದ ಮಹಿಳೆ ಮೇಲೆ ಡಿವೈಎಸ್​ಪಿಯೊಬ್ಬರು (DYSP) ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನಲ್ಲಿ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಗೃಹಸಚಿವರ ತವರಿನಲ್ಲಿ ಈ ರೀತಿಯ ಹೇಯ ಕೃತ್ಯ ನಡೆದಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದ ಮಹಿಳೆಯೊಂದಿಗೆ ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ (DYSP)  ರಾಮಚಂದ್ರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದು, ವಿಡಿಯೋ ವೈರಲ್​ ಆದ ಬೆನ್ನಲ್ಲೇ ಅಧಿಕಾರಿ ತಲೆಮಾರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಜಮೀನು ವಿವಾದ ಸಂಬಂಧ ಪಾವಗಡದ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಸಂಬಂಧ ಮಹಿಳೆಯನ್ನು ವಿಚಾರಣೆಗೆ ಕರೆಸಲಾಗಿತ್ತು. ಈ ವೇಳೆ ಮಹಿಳೆಯನ್ನು ಪುಸಲಾಯಿಸಿದ ರಾಮಚಂದ್ರಪ್ಪ (DYSP) ಆಕೆಯನ್ನು ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮಹಿಳೆ ಜತೆ ಬಂದಿದ್ದ ವ್ಯಕ್ತಿ ವಿಡಿಯೋವನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿಯೇ ಈ ಕೃತ್ಯ ನಡೆದಿರುವುದು ಇಡೀ ಪೊಲೀಸ್ ಇಲಾಖೆಯೆ ತಲೆ ತಗ್ಗಿಸುವಂತೆ ಮಾಡಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಅನೇಕರು ತಪ್ಪಿತಸ್ಥ ಅಧಿಕಾರಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸುತ್ತಿದ್ದು, ಕೆಲಸದಿಂದ ವಜಾ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕಾಣೆಯಾಗಿರುವ ಸಂತ್ರಸ್ತ ಮಹಿಳೆ ಹಾಗೂ ತಪ್ಪಿತಸ್ಥ ಅಧಿಕಾರಿಯನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.