ಜಿಲ್ಲೆ

ಶಿವರಾತ್ರಿ ದಿನ ದ್ವಾದಶ ಜ್ಯೋತಿರ್ಲಿಂಗ ದರ್ಶನ

ಬಂಟ್ವಾಳ: ಮಹಾಶಿವರಾತ್ರಿ ಪ್ರಯುಕ್ತ ಫೆ.23 ರಿಂದ ಫೆ.28ರವರೆಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಬಿ.ಸಿ.ರೋಡು ಶಾಖೆಯ ವತಿಯಿಂದ ಬಿ.ಸಿ.ರೋಡ್‌ನ ರಕ್ತೇಶ್ವರಿ ದೇವಾಲಯದ ಬಳಿ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಸಾವಿತ್ರಿ ಹೇಳಿದರು.

ಫೆ.23 ರಂದು ಸಂಜೆ 5 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ, ಡಿವೈಎಸ್ಪಿ ಎಸ್.ವಿಜಯಪ್ರಸಾದ್, ತಹಸೀಲ್ದಾರ್ ಅರ್ಚನಾ ಡಿ.ಭಟ್ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು ಹಾಗೂ ತಾಲೂಕಿನ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಬಿ.ಸಿ.ರೋಡ್‌ನ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಫೆ.26 ಸಂಜೆ 5ಕ್ಕೆ ಶಿವರಾತ್ರಿ ಕಾರ್ಯಕ್ರಮ ನಡೆಯಲಿದೆ. ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಫೆ.28ರಂದು ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ರಾಜೇಶ್ ನಾಕ್, ಪುರಸಭೆ ಅಧ್ಯಕ್ಷ ವಾಸುಪೂಜಾರಿ ಮತ್ತಿತರ ಗಣ್ಯರು ಭಾಗವಹಿಸುವರು.

ಬಿ.ಸಿ.ರೋಡ್‌ನ ಕೇಂದ್ರದಲ್ಲಿ ರಾಜಯೋಗ ಶಿಕ್ಷಣ ಕಲಿಸಲಾಗುತ್ತದೆ. ಧರ್ಮ ಜಾತಿ ಭೇದವಿಲ್ಲದೆ ಇದರ ಪ್ರಯೋಜನ ಪಡೆಯಬಹುದು ಎಂದರು. ಈಶ್ವರೀ ವಿದ್ಯಾಲಯದ ಸಂಯೋಜಕ ರಾಜಯೋಗಿ ಬ್ರಹ್ಮಕುಮಾರ ಗಣಪತಿ ಉಪಸ್ಥಿತರಿದ್ದರು.

ಜ್ಯೋತಿರ್ಲಿಂಗ ದರ್ಶನ

ಭಕ್ತರಿಗೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 8ರವರೆಗೆ ಜ್ಯೋತಿರ್ಲಿಂಗ ದರ್ಶನಕ್ಕೆ ಮತ್ತು ಪೂಜೆಗೆ ಅವಕಾಶವಿದೆ, ಸಮಾರೋಪದಂದು ರಾತ್ರಿ 7 ರಿಂದ 9ರವರೆಗೆ ಶಿವಲೀಲೆ ಸಾರುವ ಶ್ರೀ ಶಿವ ಮಹಾತ್ಮೆ ಯಕ್ಷಗಾನ ನಡೆಯಲಿದೆ.