ಕುಶಾಲನಗರ:
ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡೆಸುತ್ತಿರುವ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಗುರುವಾರ ಇಲ್ಲಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಕಳೆದ ಎರಡು ವರ್ಷಗಳಿಂದ ನಾವು ಗಮನಿಸಿದ ಹಾಗೆ ಅತ್ಯಂತ ಭ್ರಷ್ಟ ಸರ್ಕಾರ ಇದಾಗಿದೆ. ಕೊಳ್ಳೆ ಹೊಡೆಯುವ, ಲೂಟಿಕೋರರ ಕೂಟವಾಗಿದೆ, ಹತ್ತು ವರ್ಷ ಶಾಸಕನಾಗಿ, 20 ವರ್ಷ ಲೋಕಸಭಾ ಸದಸ್ಯನಾಗಿ, ಸಚಿವನಾಗಿ, ಕೇಂದ್ರ ಮಂತ್ರಿಯಾಗಿ 30 ವರ್ಷದ ರಾಜಕೀಯ ಜೀವನದಲ್ಲಿ ನೋಡಿದ ಹಾಗೆ ಈ 75 ವರ್ಷಗಳಲ್ಲಿ ಇಂಥ ಲೂಟಿಕೋರ ರಾಜ್ಯ ಸರ್ಕಾರ ನೋಡಿರಲಿಲ್ಲ.
ಈತನಕ ಡಿ.ಕೆ. ಶಿವಕುಮಾರ್ ಹೆಸರು ಕೇಳಿ ಬಂದಿತ್ತು. ಜತೆಗೆ ಈಗ ಗೃಹಮಂತ್ರಿ ಪರಮೇಶ್ವರ್ ಅವರ ಭ್ರಷ್ಟಾಚಾರ ಹೊರಗೆ ಬರುತ್ತಿದೆ. ಅವರೊಬ್ಬ ಪ್ರಾಮಾಣಿಕರು ಎನ್ನುವ ಅಭಿಪ್ರಾಯ ಇತ್ತು. ಆದರೆ ಸಹವಾಸ ದೋಷದಿಂದ ಅವರೂ ಕೆಟ್ಟಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡಿರುವ ಇಡಿ ಎಲ್ಲವನ್ನೂ ಬಯಲು ಮಾಡಲಿದೆ.
ಶೇ. 68 ರಷ್ಟು ಆದಾಯ ರಾಜ್ಯಕ್ಕೆ ನೀಡುವ ಬೆಂಗಳೂರಿನ ಜನತೆ ಇಂದು ಮೂಲಭೂತ ಸೌಕರ್ಯವಿಲ್ಲದ ಒದ್ದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ನಮ್ಮ ಸರ್ಕಾರವಿದ್ದಾಗ ಒಳಚರಂಡಿ ನಿರ್ಮಾಣ ಕಾರ್ಯಕ್ಕೆ ವಿಶೇಷ ಅನುದಾನದಲ್ಲಿ 5000 ಕೋಟಿ ರೂ. ಹಣ ನೀಡಲಾಗಿತ್ತು. ಆದರೆ ಈ ಸರ್ಕಾರ ಆ ಹಣವನ್ನೆಲ್ಲ ಲೂಟಿ ಮಾಡಿದೆ. ಮೊನ್ನೆ ಮಳೆಗೆ ಒಂದೂವರೆ ಕೋಟಿ ಬೆಂಗಳೂರಿನ ಜನತೆ ತೇಲಾಡುತ್ತಿರುವಾಗ ಇವರು ಮಜಾ ಮಾಡಲಿಕ್ಕೆ ಗುಲ್ಬರ್ಗಾದಲ್ಲಿ ಎರಡನೇ ವರ್ಷದ ಸಂಭ್ರಮಾಚರಣೆ ಮಾಡುವ ಮೂಲಕ ರಾಜ್ಯದ ಜನತೆಗೆ ಅಪಮಾನ ಮಾಡಿದ್ದಾರೆ ಎಂದು ಹೇಳಿದರು.