ಜಿಲ್ಲೆ

ಡಿವಿಜಿ ಸಭಾಂಗಣ ಉದ್ಘಾಟನೆ

ಪ್ರಸಿನ್ ಕೆ.ಆರ್

ಹಾಸನ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನೂತನವಾಗಿ ನಿರ್ಮಿಸಿರುವ ಡಿವಿಜಿ ಸಭಾಂಗಣವನ್ನು ಮಂಗಳವಾರ ಶಾಸಕ ಸ್ವರೂಪ್ ಪ್ರಕಾಶ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಪತ್ರಕರ್ತರ ಸಂಘ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಲಿ ಎಂದರು.

ಡಿವಿಜಿ ಸಭಾಂಗಣ ನಿರ್ಮಾಣದ ಸಂಪೂರ್ಣ ವೆಚ್ಚದ ಅನುದಾನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು. ಜಿಲ್ಲಾ ಸಂಘವು ಇತ್ತೀಚೆಗೆ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯ ಹಾಗೂ ಪತ್ರಕರ್ತರಿಗೆ ಆರೋಗ್ಯ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದು ಮುಂದೆಯೂ ಇದೇ ರೀತಿ ಸಂಘವು ಮುನ್ನಡೆಯಲಿ ಎಂದು ಶುಭ ಕೋರಿದರು.

ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಮಾತನಾಡಿ, ಸಭಾಂಗಣಕ್ಕೆ ಡಿವಿಜಿ ಹೆಸರು ನಾಮಕರಣ ಮಾಡಿರುವುದು ಸಂತಸ ತಂದಿದೆ. ಗುಂಡಪ್ಪ ರಚಿಸಿರುವ ಮಂಕುತಿಮ್ಮನ ಕಗ್ಗ ಇಂದಿಗೂ ಎಲ್ಲರ ಜೀವನೋತ್ಸಾಹಕ್ಕೆ ಪ್ರೇರಣೆ ನೀಡುತ್ತದೆ.

ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗುಡೂರು ಮಾತನಾಡಿ, ಪತ್ರಕರ್ತರ ಸಂಘವನ್ನು ಮೊದಲ ಬಾರಿಗೆ ಹುಟ್ಟುಹಾಕಿದ್ದು ಡಿ.ವಿ. ಗುಂಡಪ್ಪನವರು. ನಂತರ ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಖಾದ್ರಿ ಶಾಮಣ್ಣ ಅವರು ಇದಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಎಂದು ಮರು ನಾಮಕರಣ ಮಾಡಿದರು. ಕೇವಲ ಎಂಟು ಜನ ಸದಸ್ಯರಿಂದ ಪ್ರಾರಂಭವಾದ ಸಂಘವು ಇಂದು ರಾಜ್ಯಾದ್ಯಂತ ವಿಸ್ತರಿಸಿ 9500 ಸದಸ್ಯರನ್ನು ಹೊಂದಿದೆ ಎಂದರು.

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್ ವೇಣು ಕುಮಾರ್ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗೆ ಪದಾಧಿಕಾರಿಗಳು ಸೇರಿದಂತೆ ಎಲ್ಲ ಪತ್ರಕರ್ತರ ಸಹಕಾರ ದೊರಕುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷ ಕೆ.ಎಂ.ಹರೀಶ್, ವಾರ್ತಾಧಿಕಾರಿ ಮೀನಾಕ್ಷಮ್ಮ , ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್ .ಬಿ ಮದನಗೌಡ , ರಾಜ್ಯ ಪತ್ರಕರ್ತರ ಸಂಘದ ವಿಶೇಷ ಆಹ್ವಾನಿತ ಸದಸ್ಯ ರವಿ ನಾಕಲಗೂಡು , ಮಾಜಿ ಅಧ್ಯಕ್ಷರಾದ ಬಾಳ್ಳು ಗೋಪಾಲ್, ಲೀಲಾವತಿ, ಪ್ರಧಾನ ಕಾರ್ಯದರ್ಶಿ ಬಿ.ಸಿ ಶಶಿಧರ್, ಉಪಾಧ್ಯಕ್ಷ ಎಚ್.ಟಿ.ಮೋಹನ್ ಕುಮಾರ್ , ಖಜಾಂಜಿ ಕುಮಾರ್, ಕಾರ್ಯದರ್ಶಿ ನಟರಾಜ್ , ಸಿ.ಬಿ. ಸಂತೋಷ್, ಪಿ.ಎ.ಶ್ರೀನಿವಾಸ್ , ಇಂಡಿಯಾನಾ ಆಸ್ಪತ್ರೆಯ ಡಾ. ನಿರೂಪ್, ಸೇರಿದಂತೆ ಇತರರು ಇದ್ದರು.