ಜಿಲ್ಲೆ

ಕಷ್ಟದಲ್ಲಿರುವವರಿಗೆ ನೆರವಾಗುವುದು ಕರ್ತವ್ಯ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಮೈಸೂರು: ಪಾಲಕರು ಮಕ್ಕಳಿಗೆ ಸೌಲಭ್ಯದ ಜತೆಗೆ ಕಷ್ಟದ ಅರಿವು ಮೂಡಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.


ವಿಜಯ ವಿಠಲ ವಿದ್ಯಾಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಸಾಧಕರ ದಿನದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಯಾವ ಜವಾಬ್ದಾರಿ ನೀಡದೆ ಬೆಳೆಸುತ್ತಿದ್ದೇವೆ. ಇದು ಸರಿಯಲ್ಲ. ಜವಾಬ್ದಾರಿ ತೋರಿಸುವ ಒಳ್ಳೆಯ ಅವಕಾಶ ಕಲ್ಪಿಸಬೇಕು. ಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮ ಕರ್ತವ್ಯ ಎಂದರು.


ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಈಗಿನ ಕಾಲದಲ್ಲಿ ಶಿಕ್ಷಣವೇ ಶಕ್ತಿ. ಜ್ಞಾನವಿದ್ದರೆ ಮಾತ್ರ ವ್ಯಕ್ತಿಗೆ ಬೆಲೆ. ಸೇವೆ ಮತ್ತು ತ್ಯಾಗ ಭಾರತ ದೇಶದ ಆದರ್ಶವೆಂದು ವಿದೇಶದಲ್ಲಿ ನೀಡಿದ್ದ ಸಂದರ್ಶನದಲ್ಲಿ ಸ್ವಾಮಿ ವಿವೇಕಾನಂದರು ಹೇಳಿದ್ದ ಮಾತನ್ನು ನೆನಪಿಸಿದರು.


ವಿಜಯ ವಿಠಲ ವಿದ್ಯಾಶಾಲೆಯ ಟ್ರಸ್ಟಿ ಡಾ.ಎಂ.ಜಗನ್ನಾಥ ಶೆಣೈ ಮಾತನಾಡಿ, ಮಕ್ಕಳಿಗೆ ಕಷ್ಟದ ಸಂದರ್ಭವನ್ನು ಅರಿಯುವಂತೆ ಮಾಡಬೇಕು. ಮಕ್ಕಳ ಬೆಳವಣಿಗೆಯಲ್ಲಿ ಪಾಲಕರು ಮತ್ತು ಶಿಕ್ಷಕರ ಜವಾಬ್ದಾರಿ ಇದೆ ಎಂದರು.


ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ, ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ 2023-24ನೇ ಶೈಕ್ಷಣಿಕ ವರ್ಷದ ತರಗತಿವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ, ಪ್ರಶಸ್ತಿ ಪತ್ರ ನೀಡಲಾಯಿತು.


ವಿಜಯ ವಿಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್.ವಾಸುದೇವ್ ಭಟ್, ಟ್ರಸ್ಟಿಗಳಾದ ಎಸ್.ಫಣಿರಾಜ್, ಬಿ.ಎಸ್.ರವಿಕುಮಾರ್, ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಸತ್ಯಪ್ರಸಾದ್, ವಿಜಯ ವಿಠಲ ವಿದ್ಯಾ ಶಾಲೆಯ ಪ್ರಾಂಶುಪಾಲೆ ಎಸ್.ಎ.ವೀಣಾ ಇನ್ನಿತರರಿದ್ದರು.