ಹುಬ್ಬಳ್ಳಿ: ಧೂಳು ನಗರಿ ಎಂಬ ಅಪಖ್ಯಾತಿಗೆ ಒಳಗಾಗಿರುವ ಹುಬ್ಬಳ್ಳಿ -ಧಾರವಾಡ ಮಹಾನಗರವನ್ನು ಸ್ವಚ್ಛಂದವಾಗಿಡಲು ಮಹಾನಗರ ಪಾಲಿಕೆ ಯೋಜನೆ ರೂಪಿಸಿದ್ದು, ಕೆಲವೇ ದಿನಗಳಲ್ಲಿ ಇದು ಕೈಗೂಡುವ ನಿರೀಕ್ಷೆ ಹುಟ್ಟಿದೆ.
ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ, ಮಣ್ಣು, ಇತ್ಯಾದಿಗಳು ಬಿದ್ದು ಪಾದಚಾರಿಗಳು, ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಅಲ್ಲದೇ, ಧೂಳಿನ ಕಣಗಳು ಶ್ವಾಸದ ಮೂಲಕ ಒಳಹೋಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಜನರ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಂಡಿದೆ. ನ್ಯಾಷನಲ್ ಕ್ಲೀನ್ ಏರ್ ಪ್ರೋಗ್ರಾಂ (ರಾಷ್ಟ್ರೀಯ ಶುದ್ಧ ಗಾಳಿ ಯೋಜನೆ) ಅಡಿಯಲ್ಲಿ ಹಣಕಾಸಿನ ನೆರವು ಒದಗಿಸುತ್ತಿದೆ.
ಈ ಯೋಜನೆಯಡಿ ಮಹಾನಗರ ಪಾಲಿಕೆಗೆ ಸುಮಾರು 20 ಕೋಟಿ ರೂ. ಅನುದಾನ ನೀಡುತ್ತಿದ್ದು, ಇದರಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯು ಧೂಳು ಹೀರುವ ಎರಡು ಯಂತ್ರಗಳನ್ನು ಖರೀದಿ ಮಾಡಲು ಮುಂದಾಗಿದೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯು ಈ ಯೋಜನೆ ಉಸ್ತುವಾರಿ ನೋಡಿಕೊಳ್ಳಲಿದ್ದು, ಉಳಿದ ಹಣವನ್ನು ಶುದ್ಧ ಪರಿಸರ ನಿರ್ಮಾಣಕ್ಕೆ ಬಳಸುವ ಉದ್ದೇಶ ಇಟ್ಟುಕೊಂಡಿದೆ. ರಾಜ್ಯದ ಎರಡನೇ ಅತಿದೊಡ್ಡ ನಗರವೆಂಬ ಕೀತಿರ್ಗೆ ಪಾತ್ರವಾಗಿರುವ ಹುಬ್ಬಳ್ಳಿ -ಧಾರವಾಡದ ರಸ್ತೆಗಳು ಡಿಸೆಂಬರ್ ವೇಳೆಗೆ ಸ್ವಚ್ಛಗೊಳ್ಳುವ ಯೋಗ ಇದೀಗ ಕೂಡಿ ಬರುತ್ತಿದೆ.
ಈಗಾಗಲೇ ಬೆಳಗಾವಿ, ದಾವಣಗೆರೆ, ತುಮಕೂರು ಮುಂತಾದ ಮಹಾನಗರಗಳಲ್ಲಿ ಇಂತಹ ಯಂತ್ರಗಳ ಬಳಕೆ ಮಾಡಲಾಗುತ್ತಿದೆ.
ರಸ್ತೆಗಳು ಎಷ್ಟಿವೆ: ಹುಬ್ಬಳ್ಳಿ -ಧಾರವಾಡದಲ್ಲಿ ಒಟ್ಟು 2,739 ಕಿ.ಮೀ. ರಸ್ತೆಗಳಿವೆ. ಇದರಲ್ಲಿ 2,300 ಕಿ.ಮೀ. ಕಾಂಕ್ರಿಟ್ ಆಗಿವೆ. 298 ಕಿ.ಮೀ. ಕಚ್ಚಾ ರಸ್ತೆ ಇವೆ. ಮೊದಲ ಹಂತದಲ್ಲಿ ಕಾಂಕ್ರಿಟ್ ರಸ್ತೆಗಳನ್ನು ಸ್ವಚ್ಛತೆಗೆ ಆಯ್ದುಕೊಳ್ಳಲಾಗುವುದು. ದಿನಕ್ಕೆ 20 ಕಿ.ಮೀ. ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಯಂತ್ರಗಳು ಹೊಂದಿವೆ. 2.5 ಎಂಎಂನಿಂದ 10 ಎಂಎಂ ವರೆಗಿನ ಕಣಗಳನ್ನು ಇದು ಹೀರಲಿದೆ. ನಂತರ ನೀರು ಚಿಮುಕಿಸುತ್ತದೆ. ಇದಕ್ಕಾಗಿ ಪಾಲಿಕೆಯ ವಾಹನ ಚಾಲಕರಿಗೆ ತರಬೇತಿ ನೀಡಲಾಗುವುದು. ಯಂತ್ರಗಳ ಖರೀದಿಗೆ ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡುತ್ತಿದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.
ಈ ಹಿಂದೆಯೂ ಖರೀದಿಸಲಾಗಿತ್ತು: ಧೂಳು ಹೀರಲು ಈ ಹಿಂದೆಯೂ ಒಂದು ಮಶೀನ್ ಅನ್ನು ಮಹಾನಗರ ಪಾಲಿಕೆ ಖರೀದಿಸಿತ್ತು. ಆರೇಳು ತಿಂಗಳು ಮಾತ್ರ ಅದು ಕಾರ್ಯ ನಿರ್ವಹಿಸಿತು. ಅದು ಬಿಟ್ಟರೆ ಗಣ್ಯರು ನಗರಕ್ಕೆ ಬಂದಾಗ ಒಂದಿಷ್ಟು ಧೂಳು ತೆಗೆಯಲು ಬಳಸಲಾಯಿತು. ಇದೀಗ ಅದು ಮೂಲೆ ಸೇರಿದೆ. ಹೊಸ ಯೋಜನೆಯ ಮಶೀನ್ಗಳು ಕೂಡ ಹೀಗಾಗದಿರಲಿ ಎಂಬುದು ಜನತೆಯ ಆಶಯ.
ಧೂಳು ಹೀರುವ ಒಂದು ಯಂತ್ರದ ಮೊತ್ತ 1.48 ಕೋಟಿ ರೂ.ನಂತೆ ಎರಡು ಯಂತ್ರಗಳನ್ನು ಖರೀದಿ ಮಾಡಲಾಗುತ್ತಿದೆ. ಇದಕ್ಕಾಗಿ ಆನ್ಲೈನ್ ಟೆಂಡರ್ ಕರೆಯಲಾಗಿದ್ದು, ನ. 21ಕ್ಕೆ ಟೆಂಡರ್ ಓಪನ್ ಆಗಲಿದೆ. ಡಿಸೆಂಬರ್ ಮೊದಲ ವಾರ ಯಂತ್ರಗಳು ಬರುವ ನಿರೀೆ ಇದೆ. ರಾತ್ರಿ ವೇಳೆಯಲ್ಲಿ ಮಾತ್ರ ಈ ಯಂತ್ರಗಳು ಧೂಳು ತೆಗೆಯುವ ಕೆಲಸ ಮಾಡಲಿವೆ.
-ಡಾ. ಈಶ್ವರ ಉಳ್ಳಾಗಡ್ಡಿ, ಮಹಾನಗರ ಪಾಲಿಕೆ ಆಯುಕ್ತ