ವಿನಯ್ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಿರಂತರ ಮಳೆಯ ಕಾರಣದಿಂದ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ, ವಿಳಂಬವಾಗಿ ಮುಂದುವರಿಯುತ್ತಿರುವುದು ಅನಿವಾರ್ಯವಾಗಿದೆ. ಆದರೆ ಹಲವೆಡೆ ಹೆದ್ದಾರಿ ಕಾಮಗಾರಿಯಿಂದಾಗಿ ಮಿತಿಯಿಲ್ಲದ ಧೂಳು ಆವರಿಸುತ್ತಿರುವುದರಿಂದ ಎಲ್ಲೆಡೆ ಅನಾರೋಗ್ಯದ ಸಮಸ್ಯೆ ಕಾಣಿಸಿದೆ. ಧೂಳಿನ ನಿವಾರಣೆಗೆ ಪರಿಣಾಮಕಾರಿಯಾದ ಕ್ರಮವನ್ನು ಅನುಸರಿಸಲು ನಾಗರಿಕರು ಆಗ್ರಹಿಸಿದ್ದಾರೆ. ಹೆದ್ದಾರಿ ಅಗಲೀಕರಣದ ಕಾರಣಕ್ಕೆ ಹಲವೆಡೆ ಮಣ್ಣ್ಣು ಅಗೆತದ ಕಾರ್ಯ ನಡೆದಿದೆ. ಇನ್ನು ಕೆಲವೆಡೆ ಎತ್ತರಿಸಿದ ರಸ್ತೆ ನಿರ್ಮಾಣಕ್ಕಾಗಿ ಸರ್ವೀಸ್ ರಸ್ತೆಗಳನ್ನೂ ನಿರ್ಮಿಸಿಯಾಗಿದೆ. ಆದರೆ ಕಳೆದ ಮಳೆಗಾಲದಲ್ಲಿ ಸುರಿದ ಮಳೆಗೆ ಅದೆಲ್ಲವೂ ಕೆಟ್ಟು ಹೋಗಿ ಜಲ್ಲಿ ಎದ್ದು ಬಂದಿದೆ. ಕೆಟ್ಟು ಹೋದ ರಸ್ತೆಯನ್ನು ಡಾಂಬರ್ ಹಾಕಿ ದುರಸ್ತಿ ಮಾಡಿ ಎಂದು ಬೇಡಿಕೆ ಇಟ್ಟಾಗಲೆಲ್ಲಾ ಮಳೆ ನಿಲ್ಲಲಿ. ಮಳೆಗಾಲದಲ್ಲಿ ಡಾಂಬರು ಹಾಕಿದರೆ ನಿಲ್ಲುವುದಿಲ್ಲ ಎಂದು ಅಧಿಕಾರಿಗಳೂ ತಿಳಿಸಿದ್ದರು. ಅಧಿಕಾರಿಗಳ ಮಾತನ್ನು ನಂಬಿ ಶಾಸಕರೂ ಭರವಸೆ ನೀಡಿದ್ದರು. ಆದರೆ ಮಳೆ ನಿಂತು ವಾರ ಕಳೆದರೂ ರಸ್ತೆಯ ಸ್ಥಿತಿ ಸುಧಾರಿಸಿಲ್ಲ. ಧೂಳಿನ ಸಮಸ್ಯೆಯಿಂದಾಗಿ ಜನಾಕ್ರೋಶ ವ್ಯಕ್ತವಾಗುತ್ತಿರುವ ಕಾರಣಕ್ಕೆ ದಿನಕ್ಕೆ ಒಂದೆರಡು ಬಾರಿ ನೀರು ಹಾಯಿಸುವ ಕಾರ್ಯ ನಡೆಸಲಾಗುತ್ತಿದೆಯಾದರೂ ಸುಡುವ ಬಿಸಿಲ ಜಳಕ್ಕೆ ನೀರು ತಕ್ಷಣವೇ ಆವಿಯಾಗಿ ಮತ್ತೆ ಧೂಳು ವ್ಯಾಪಿಸುತ್ತಿದೆ. ಉಪ್ಪಿನಂಗಡಿ ಪೇಟೆಯ ಪರಿಸರದಲ್ಲಿ ಧೂಳು ಅಪಾಯಕಾರಿ ಮಟ್ಟದಲ್ಲಿದೆ. ಆಸ್ಪತ್ರೆಗೆ ಬರುವ ಮಕ್ಕಳು, ಶಾಲೆಯಲ್ಲಿನ ಮಕ್ಕಳು ಧೂಳಿನ ಸಮಸ್ಯೆಗೆ ನಿಲುಕಿ ನರಳಾಡುತ್ತಿದ್ದಾರೆ. ಅವರ ಹಿತಕ್ಕಾಗಿಯಾದರೂ ಧೂಳನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲೆಲ್ಲಿ ಡಾಂಬರು ಕಿತ್ತು ಹೋಗಿದೆಯೋ ಅಲ್ಲಲ್ಲಿ ಧೂಳು ಎದ್ದೇಳುತ್ತಿದೆ. ಈಗ ಹಾಕುತ್ತಿರುವ ನೀರಿನಿಂದಾಗಿ ಕ್ಷಣಿಕ ಪ್ರಯೋಜನವಾದೀತು. ಒಂದು ಬಿಸಿಲಿಗೆ ನೀರು ಒಣಗಿ ಹೋಗಿ ಮತ್ತೆ ಧೂಳು ಕಾಡುತ್ತಿದೆ. ಅದಕ್ಕಾಗಿ ಶಾಶ್ವತ ಪರಿಹಾರದ ನೆಲೆಗಟ್ಟಿನಲ್ಲಿ ತೆಳುವಾಗಿಯಾದರೂ ಡಾಂಬರ್ ಹಾಕಿ ರಸ್ತೆಯನ್ನು ಧೂಳುಮುಕ್ತಗೊಳಿಸಲಿ. ತನ್ಮೂಲಕ ಜನರ ಆರೋಗ್ಯವನ್ನು ಕಾಪಾಡಲಿ ಎಂದು ಧೂಳು ಸಂಬಂಧಿತ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುತ್ತಿರುವ ಹಿರಿಯ ವೈದ್ಯ ಡಾ.ಗೋವಿಂದ ಪ್ರಸಾದ್ ಕಜೆ ಆಗ್ರಹಿಸಿದ್ದಾರೆ.
ಧೂಳಿನ ಸಮಸ್ಯೆಯ ಬಗ್ಗೆ ನಾಗರಿಕರಿಂದ ವ್ಯಾಪಕ ದೂರು ಬರುತ್ತಿದೆ. ಮಾತ್ರವಲ್ಲದೆ ಧೂಳಿನಿಂದಾಗಿ ಹಲವಾರು ಮಂದಿ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಪರ್ಯಾಯ ಕ್ರಮ ಜರುಗಿಸುವವರೆಗೆ ಧೂಳು ಪಸರಿಸದಂತೆ ನಿರಂತರ ನೀರು ಹಾಯಿಸಲು ಕಾಮಗಾರಿ ನಿರತ ಸಂಸ್ಥೆಯ ಅಧಿಕಾರಿಗಳಿಗೆ ವಿನಂತಿಸಲಾಗಿದೆ. ವಿದ್ಯಾಲಕ್ಷ್ಮೀ ಪ್ರಭು ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ಕಾಮಗಾರಿಯ ಲೋಪದಿಂದಾಗಿ ವಾಹನಗಳ ಸಂಚಾರದಿಂದ ಮೂಡುತ್ತಿರುವ ಧೂಳಿನ ಸಮಸ್ಯೆ ಗಂಭೀರ ಸ್ವರೂಪದ್ದಾಗಿದೆ. ಒಂದು ಕ್ಷಣ ವಾಹನವನ್ನು ನಿಲ್ಲಿಸಿ ಅಂಗಡಿಗೆ ಹೋಗಿ ಹಿಂತಿರುಗುವಷ್ಟರಲ್ಲಿ ವಾಹನದಲ್ಲಿ ದೊಡ್ಡ ಪ್ರಮಾಣದಲ್ಲಿ ಧೂಳು ಸಂಗ್ರಹವಾಗಿರುತ್ತದೆ. ಮಕ್ಕಳ ದೇಹವನ್ನು ಪ್ರವೇಶಿಸಿದರೆ ಆರೋಗ್ಯ ಸ್ಥಿತಿ ಏನಾದೀತು? ಅಬ್ದುಲ್ ಮಜೀದ್ ಎಸ್‌ಡಿಎಂಸಿ ಅಧ್ಯಕ್ಷ