ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕೇಂದ್ರದ ಸ್ವದೇಶ್ ದರ್ಶನ 2.0 ಯೋಜನೆಗೆ ಸಂಬಂಧಿಸಿ ಸಭೆ ನಡೆಯಿತು. 
ಜಿಲ್ಲೆ

ಧೂಳುಮುಕ್ತ ಹಂಪಿ ನಿರ್ಮಾಣಕ್ಕೆ ಯೋಜನೆ - ಜಿಲ್ಲಾಧಿಕಾರಿ ಮಾಹಿತಿ

ಶಶಿಧರ ಎಲ್

ಹೊಸಪೇಟೆ: ಸ್ವದೇಶ್ ದರ್ಶನ ಯೋಜನೆಯ ಮೊದಲ ಹಾಗೂ ಎರಡನೇ ಹಂತದಲ್ಲಿ ಐತಿಹಾಸಿಕ ತಾಣ ಹಂಪಿಯಲ್ಲಿ ಮೂಲಸೌಕರ್ಯ ಸೇರಿದಂತೆ ವಿವಿಧ ಮಾರ್ಗಗಳ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕೇಂದ್ರದ ಸ್ವದೇಶ್ ದರ್ಶನ 2.0 ಯೋಜನೆಗೆ ಸಂಬಂಧಿಸಿ ಡೆಸ್ಟಿನೇಷನ್ ಮ್ಯಾನೇಜ್‌ಮೆಂಟ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಮೊದಲ ಹಂತದಲ್ಲಿ ಅತ್ಯಾಧುನಿಕ ಶೌಚಗೃಹಗಳ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಚುನಾವಣೆ ನಂತರ ಕಾಮಗಾರಿಗಳು ಆರಂಭವಾಗಲಿವೆ.

ಎರಡನೇ ಹಂತದಲ್ಲಿ ಹಳೆಯ ರಸ್ತೆಗಳು, ಆಸನದ ವ್ಯವಸ್ಥೆಗಳು ಸೇರಿದಂತೆ ಸ್ಮಾರಕಗಳಿಂದ ಸ್ಮಾರಕಗಳಿಗೆ ಮಾರ್ಗಗಳ ಅಭಿವೃದ್ಧಿಪಡಿಸಲಾಗುತ್ತದೆ. ಧೂಳುಮುಕ್ತ ಹಂಪಿ ಮಾಡಲು ಯೋಜನೆ ರೂಪಿಸಲಾಗಿದೆ. ಹಂಪಿಯ ನಾನಾ ಕಡೆ ಪಾರ್ಕಿಂಗ್ ಪ್ಲಾಜಾಗಳನ್ನು ನಿರ್ಮಿಸಲಾಗುತ್ತದೆ ಎಂದರು.

ಸ್ಮಾರಕಗಳ ಮಾದರಿಯಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ, ವಿಜಯ ವಿಠ್ಠಲ ದೇವಾಲಯಕ್ಕೆ ತೆರಳಲು ಒಂದು ಪರ್ಯಾಯ ರಸ್ತೆ ನಿರ್ಮಿಸಲಾಗುತ್ತದೆ. ದೇವಾಲಯದ ಪೂರ್ವ ಬಾಗಿಲಿಗೆ ಮುಖವಾಗಿ ರಸ್ತೆಯ ಅಭಿವೃದ್ಧಿಪಡಿಸಿ ನದಿಗೆ ಮಾರ್ಗ ಜೋಡಣೆ ಮಾಡಲಾಗುವುದು. ಐತಿಹಾಸಿಕ ಸ್ಥಳಗಳ ಹಾಗೂ ಸ್ಮಾರಕಗಳಲ್ಲಿ ಕಲ್ಲುಗಳಿಂದ ಶಾಶ್ವತವಾಗಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತದೆ. ಎಲೆಕ್ಟ್ರಿಕಲ್ ವಾಹನಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರವಾಸಿಗರಿಗೆ ಮಾಹಿತಿ ಒದಗಿಸಲು ಕ್ಯೂಆರ್ ಕೋಡ್, ಹವಾಮಾದಿಂದಲೇ ಕಡಿಮೆ ದರದಲ್ಲಿ ಹಂಪಿ ಬೈ ನೈಟ್, ವಿಜಯವಿಠ್ಠಲ ದೇವಸ್ಥಾನದ ಹತ್ತಿರ ಕುಡಿವ ನೀರಿನ ಮೊಬೈಲ್ ವ್ಯಾನ್ ಸೇರಿದಂತೆ ಸ್ವದೇಶ್ ದರ್ಶನ 2.0 ಯೋಜನೆಯಡಿ ಪ್ಯಾಕೇಜ್-2ರಲ್ಲಿ ವಿವಿಧ ಯೋಜನೆಗಳ ವಿಸ್ತೃತ ಪರಿಕಲ್ಪನಾ ವರದಿ ತಯಾರಿಸಬೇಕಿದೆ ಎಂದರು.