ಜಿಲ್ಲೆ

ತುಮಕೂರಲ್ಲಿ ದಸರಾ ಸಡಗರ

ತುಮಕೂರು ಡೆಸ್ಕ್

ನಗರದ ಜೂನಿಯರ್​ ಕಾಲೇಜು ಮೈದಾನದಲ್ಲಿ ವಿಧ್ಯುಕ್ತ ಚಾಲನೆ

ವಿಜಯವಾಣಿ ಸುದ್ದಿಜಾಲ ತುಮಕೂರು
ಇದೇ ಮೊದಲಬಾರಿಗೆ ತುಮಕೂರು ಜಿಲ್ಲಾಡಳಿತ ಆಯೋಜಿಸಿರುವ "ತುಮಕೂರು ದಸರಾ ಉತ್ಸವ &2024' ಗುರುವಾರ ವಿಧ್ಯುಕ್ತವಾಗಿ ಆರಂಭಗೊಂಡಿತು. ನಗರದ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ನಿರ್ಮಿಸಿದ್ದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಧಾರ್ಮಿಕ ಮಂಟಪದಲ್ಲಿ ಬೆಳಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹಸಚಿವ ಡಾ. ಜಿ.ಪರಮೇಶ್ವರ್​ ಪತ್ನಿ ಕನ್ನಿಕಾಪರಮೇಶ್ವರಿ ಸಮೇತ ಶ್ರೀ ಶೈಲಪುತ್ರಿ ಅಲಂಕೃತ ಚಾಮುಂಡಿ ದೇವಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ದಸರಾ ಆಚರಣೆಗೆ ಚಾಲನೆ ನೀಡಿದರು. ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ , ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನದ ಹನುಮಂತನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವೇದಿಕೆಯಲ್ಲಿ ಡೊಳ್ಳು ಬಾರಿಸಿ ದಸರಾ ಸಾಂಸತಿಕ ಉತ್ಸವಕ್ಕೆ ಚಾಲನೆ ನೀಡಿದ ಸಚಿವ ಪರಮೇಶ್ವರ, ತುಮಕೂರು ದಸರಾ ಧಾರ್ಮಿಕ ಆಚರಣೆ, ಸಾಂಸತಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಕ್ರಮವಾಗಿ ಮೂಡಿಬರಲಿದೆ ಎಂದು ಘೋಷಿಸಿದರು.


ನಮ್ಮ ಧಾರ್ಮಿಕ ಆಚರಣೆ, ವಿಚಾರಧಾರೆ, ಭವ್ಯ ಸಂಸತಿಯನ್ನು ಉಳಿಸಿ-ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಲು ತುಮಕೂರಿನಲ್ಲಿ ಪ್ರಪ್ರಥಮ ಬಾರಿಗೆ ತುಮಕೂರು ದಸರಾ ಉತ್ಸವ ಆಚರಣೆಯನ್ನು ಪ್ರಾರಂಭಿಸಲಾಗಿದೆಯೇ ಹೊರತು ಮೈಸೂರು ದಸರಾಗೆ ಹೋಲಿಕೆ ಮಾಡಲು ಅಲ್ಲ. ನಮ್ಮೂರಿನ ಉತ್ಸವ, ನಮ್ಮೂರ ದಸರಾ ಆಗಲಿ ಎಂಬುದು ನನ್ನ ಆಶಯ ಎಂದರು. ನಮ್ಮೊಳಗಿನ, ಸಮಾಜದೊಳಗಿನ ದುಷ್ಟ ಶಕ್ತಿ ಸಂಹಾರ: ಚಾಮುಂಡೇಶ್ವರಿ ದುರ್ಗೆ ರೂಪದಲ್ಲಿ ರಾಕ್ಷಸನನ್ನು ಸಂಹಾರ ಮಾಡಿದ್ದು, ಸಮಾಜದಲ್ಲಿನ ದುಷ್ಟ ಶಕ್ತಿಗಳು ಸಂಹಾರ ಆಗಬೇಕೆಂಬುದು ತಾತ್ಪರ್ಯ. ನಮ್ಮೊಳಗಿನ, ಸಮಾಜದೊಳಗಿನ ದುಷ್ಟ ಶಕ್ತಿ ಸಂಹರಿಸಿ, ಶಿಷ್ಟ ಶಕ್ತಿ ಉದಯಿಸುವುದು ದೇವಿಯ ಆರಾಧನೆಯಿಂದ ಸಾಧ್ಯವಾಗಲಿದೆ. ಮೈಸೂರು ಅರಮನೆ, ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಉತ್ಸವವು ಶ್ರೇಷ್ಠತೆಯ ಪ್ರತಿಕವೆನಿಸಿವೆ ಎಂದು ಪರಮೇಶ್ವರ ಹೇಳಿದರು.
ಅಂತರಂಗ, ಬಹಿರಂಗ ಶುದ್ಧಿ: ದಸರಾ ಹಬ್ಬದ ಮೂಲಕ ಮನುಷ್ಯ ಅಂತರಂಗ, ಬಹಿರಂಗ ಶುದ್ಧಿಗೊಳಿಸಿಕೊಳ್ಳಬೇಕಿದೆ. ಇದನ್ನು ಧಾರ್ಮಿಕ, ಸಾಂಸತಿಕ ಹಬ್ಬವಾಗಿ ಆಚರಿಸದೆ ಶೈಕ್ಷಣಿಕವಾಗಿ ಅನುಕೂಲವಾಗಲಿ ಎಂಬುದು ತುಮಕೂರು ದಸರಾ ಆಚರಣೆಯ ಉದ್ದೇಶವಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು.

ಸಾಂಸತಿಕ ದಸರಾ ಕಾರ್ಯಕ್ರಮವನ್ನು ಸಚಿವ ಡಾ.ಜಿ.ಪರಮೇಶ್ವರ ಡೊಳ್ಳು ಬಾರಿಸಿ ಉದ್ಘಾಟಿಸಿದರು. ಸಿದ್ದಲಿಂಗ ಶ್ರೀಗಳು, ಹನುಮಂತನಾಥ ಸ್ವಾಮೀಜಿ, ಟಿ.ಬಿ.ಜಯಚಂದ್ರ, ಜಿ.ಬಿ.ಜ್ಯೋತಿಗಣೇಶ್​, ಕೆ.ಷಡಕ್ಷರಿ, ಶುಭಕಲ್ಯಾಣ್​, ಜಿ.ಪ್ರಭು, ಕೆ.ವಿ.ಅಶೋಕ್​, ಬಿ.ವಿ.ಅಶ್ವಿಜ ಮತ್ತಿತರರು ಇದ್ದರು.

ಮೈಸೂರಿನಂತೆ ತುಮಕೂರು ನಗರವೂ ಸಹ ಸಾಂಸ್ಕೃತಿಕ ನಗರವಾಗಿ ರೂಪುಗೊಳ್ಳುತ್ತಿದೆ. ನಮ್ಮಲ್ಲಿರುವ ಕೆಟ್ಟ ಭಾವನೆ ಹೋಗಲಾಡಿಸಿ ಒಳ್ಳೆಯದನ್ನು ಅಳವಡಿಸಿಕೊಳ್ಳಬೇಕು ಎಂಬ ಆಶಯವೇ ದಸರಾ ಆಚರಣೆ. ತುಮಕೂರಿನ ದಸರಾ ಉತ್ಸವವು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕು. ದಸರಾ ಆಚರಣೆಯಲ್ಲಿ ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿರುವಂತೆ ಉಳಿದ ಕೆಲಸಗಳಲ್ಲೂ ತೋರಿದರೆ ತುಮಕೂರು ಜಿಲ್ಲೆಯನ್ನು ಅಭಿವೃದ್ಧಿಯಲ್ಲಿ ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಬಹುದು ಎಂದರು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ಅಧ್ಯಕ್ಷತೆ ವಹಿಸಿದ್ದರು. ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ತಿಪಟೂರು ಶಾಸಕ ಕೆ.ಷಡಕ್ಷರಿ, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಎಡಿಸಿ ಡಾ.ಎನ್​.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ಹಿಂದು ಧರ್ಮ ನಾಲ್ವರಿಗೆ ಸೇರಿದ್ದಲ್ಲ!
ಹಿಂದು ಧರ್ಮ ಯಾರೋ ನಾಲ್ವರಿಗೆ ಸೇರಿದ್ದಲ್ಲ. ಅದರ ವಿಚಾರಧಾರೆಗಳು ಪ್ರತಿಯೊಬ್ಬ ಭಾರತೀಯನಿಗೂ ತಲುಪಬೇಕು. ಧರ್ಮದ ಆಧಾರದ ಮೇಲೆಯೇ ಡಾ.ಬಿ.ಆರ್​.ಅಂಬೇಡ್ಕರ್​ ಸಂವಿಧಾನ ರಚಿಸಿದ್ದಾರೆ. ಸ್ಥಳಿಯ ಸಂಸತಿ, ಧಾರ್ಮಿಕ ವಿಚಾರಧಾರೆಗಳು ಪ್ರತಿಯೊಬ್ಬರಿಗೂ ತಲುಪಬೇಕೆಂಬ ಮಹತ್ವದ ಉದ್ದೇಶದಿಂದಲೇ ತುಮಕೂರು ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು ನಮ್ಮ ಸಂಸತಿ, ಧಾರ್ಮಿಕ ಆಚರಣೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ತುಮಕೂರಿನ ಹಿರಿಯರು ಇದೇ ಮೈದಾನದಲ್ಲಿ ದಸರಾ ಆಚರಣೆ ಮಾಡಿಕೊಂಡುಬಂದಿದ್ದು ಅವರ ಸಲಹೆಗಳನ್ನು ಸಹ ಪಡೆದಿರುವುದಾಗಿ ಸಚಿವ ಪರಮೇಶ್ವರ ಸ್ಪಷ್ಟಪಡಿಸಿದರು.

ದೇಶದಲ್ಲೇ 9 ದಿನ ನವರಾತ್ರಿ ಹಬ್ಬ ಆಚರಿಸಲಾಗುತ್ತದೆ. ಮೈಸೂರು ದಸರಾ ಮಾದರಿಯಲ್ಲಿ ತುಮಕೂರಿನಲ್ಲಿಯೂ ದಸರಾ ಉತ್ಸವವನ್ನು ಆರಂಭಿಸಿರುವ ಜಿಲ್ಲಾಡಳಿತ ಕಾರ್ಯ ಶ್ಲಾಘನೀಯ. ಇದು ನಿರಂತರವಾಗಿ ನಡೆಯಲಿ. ಎಲ್ಲರೂ ವೈಮನಸ್ಸು ಮರೆತು ಉತ್ಸವದಲ್ಲಿ ಭಾಗಿಯಾಗಲಿ.| ಜಯಚಂದ್ರ, ದೆಹಲಿ ವಿಶೇಷ ಪ್ರತಿನಿಧಿ ನಾವೇ 4 ಜನ ಕೂತು ದಸರಾ ಆಚರಿಸೋದಲ್ಲ. ಜಿಲ್ಲೆಯ ಎಲ್ಲರೂ ಭಾಗವಹಿಸಿ ಉತ್ಸವದಲ್ಲಿ ಸಂಭ್ರಮಿಸಬೇಕು. ನಾವ್ಯಾರು ಶಾಶ್ವತವಲ್ಲ. ಈ ನಾಡು, ಸಂಸತಿ ಶಾಶ್ವತ. ವೈವಿಧ್ಯ ಸಂಸತಿ, ಪರಂಪರೆಯುಳ್ಳ ಕಲ್ಪತರು ನಾಡಿನಲ್ಲಿ ಜಿಲ್ಲಾಡಳಿತ ಆರಂಭಿಸಿರುವ ದಸರಾ ಉತ್ಸವ ಶಾಶ್ವತವಾಗಿ ನಡೆಯಲಿ.| ಕೆ.ಷಡಕ್ಷರಿ, ಶಾಸಕ ಕಳೆದ 33 ವರ್ಷದಿಂದಲೂ ತುಮಕೂರು ದಸರಾ ಸಮಿತಿ ಸಂಘಟಕರಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ಈ ಬಾರಿ ಸರ್ಕಾರದಿಂದಲೇ ದಸರಾ ಉತ್ಸವ ಆಚರಿಸುತ್ತಿ ರುವುದು ಸಂತಸದ ವಿಷಯ. ಯಾವುದೇ ವಿವಾದವಿಲ್ಲದೇ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವೈಜ್ಞಾನಿಕ ಮುನ್ನೋಟವನ್ನು ಈ ದಸರಾ ಹೊಂದಿದೆ.| ಜಿ.ಬಿ.ಜ್ಯೋತಿಗಣೇಶ್​, ನಗರ ಶಾಸಕ