ಜಿಲ್ಲೆ

ದಸರಾ ಪಂಜಿನ ಕವಾಯತು ಅಭ್ಯಾಸ: ಬೈಕ್ ಸ್ಟಂಟ್ ತಾಲೀಮು

ಮಂಜುನಾಥ ತಿಮ್ಮಯ್ಯ

ಮೈಸೂರು: ಇನ್ನು ಎರಡು ದಿನ ಬಾಕಿ ಇರುವ ದಸರಾ ಪಂಜಿನ ಕವಾಯತು ಪ್ರದರ್ಶನಕ್ಕೆ ಮಂಗಳವಾರ ಬಿರುಸಿನ ತಾಲೀಮು ನಡೆಯಿತು.

ದೇಶದ ಉದ್ದಗಲಕ್ಕೂ ಹಲವು ಸಂದರ್ಭದಲ್ಲಿ ಬೈಕ್ ಸ್ಟಂಟ್ ಮೂಲಕ ಪ್ರದರ್ಶನ ನೀಡಿ ಗಮನ ಸೆಳೆದಿರುವ ಮಿಲಿಟರಿ ಪೊಲೀಸರ ಶ್ವೇತ ಅಶ್ವ ತಂಡದ 30 ಸದಸ್ಯರು ಬೆಂಗಳೂರಿನ ಕೋರ್ ಆಫ್ ಮಿಲಿಟರಿ ಆಫೀಸ್‌ನಿಂದ ನಗರಕ್ಕೆ ಆಗಮಿಸಿದ್ದು, ಬಿಳಿ ಬಣ್ಣದ 29 ರಾಯಲ್ ಎನ್ಫೀಲ್ಡ್ ಬೈಕ್ ಹಾಗೂ 4 ಹೀರೋ ಎಕ್ಸ್‌ಪ್ರೆಸ್ ಪ್ರೋ ಬೈಕ್‌ಗಳು ಸೇರಿದಂತೆ 33 ಬೈಕ್‌ಗಳು ಬಂದಿವೆ. ಇವುಗಳನ್ನು ಬಳಸಿಕೊಂಡು ಅಭ್ಯಾಸ ಮಾಡಲಾಗುತ್ತಿದೆ. ಮಿಲಿಟರಿ ಪೊಲೀಸ್ ತಂಡದ 30 ಸದಸ್ಯರ ಪೈಕಿ 10 ಜನ ಕನ್ನಡಿಗರಿದ್ದಾರೆ.


ಬೆಳಗ್ಗೆ ಬೈಕ್ ಸ್ಟಂಟ್ ಮಾಡಿದ್ದ ಮಿಲಿಟರಿ ಪೊಲೀಸರ ತಂಡ ಸಂಜೆಯೂ ಪೂರ್ಣ ಪ್ರಮಾಣದ ಸ್ಟಂಟ್ ತರಬೇತಿ ಪಡೆದುಕೊಂಡರು. ಬೆಳಗ್ಗೆ ಮಾಡಿದ್ದ ಮಾರ್ಕ್‌ಗಳನ್ನು ಮುಂದಿಟ್ಟುಕೊಂಡು ಸಂಜೆ ತರಬೇತಿ ಪಡೆದರು.


ಅ.12ರಂದು ಜಂಬೂಸವಾರಿ ಪೂರ್ಣಗೊಂಡ ನಂತರ ಬನ್ನಿಮಂಟಪದ ಮೈದಾನದಲ್ಲಿ ದಸರಾ ಪಂಜಿನ ಕವಾಯತು ನಡೆಯಲಿದೆ. ಅದಕ್ಕೂ ಮುನ್ನ ಅ.11ರಂದು ಸಂಜೆ 7 ಗಂಟೆಗೆ ಪಂಜಿನ ಕವಾಯತಿನಲ್ಲಿ 18ರಿಂದ 20 ನಿಮಿಷ ವಿವಿಧ ಸ್ಟಂಟ್‌ಗಳ ಪ್ರದರ್ಶನ ಅಂತಿಮ ತಾಲೀಮು ಸಹ ಇರಲಿದೆ. ಅದಕ್ಕಾಗಿ ಬುಧವಾರ, ಗುರುವಾರ ಸಹ ಅಭ್ಯಾಸ ನಡೆಯಲಿದೆ.


ಈ ಸಂದರ್ಭದಲ್ಲಿ ಕೆಲವು ಮಾರ್ಕ್ ಮಾಡಲಾಗಿದ್ದು, ಯಾವ ಬೈಕ್ ಯಾವ ಪಾಯಿಂಟ್‌ನಲ್ಲಿ ಹೋಗಬೇಕು, ಯಾವ ಸ್ಥಳದಲ್ಲಿ ತಿರುವು ಪಡೆಯಬೇಕು, ಯಾವ ಸ್ಥಳದಲ್ಲಿ ಜಂಪ್ ಮಾಡಬೇಕು ಸೇರಿದಂತೆ ಕೆಲ ಸ್ಟಂಟ್‌ಗೆ ಗುರುತು ಮಾಡುವ ಪ್ರಕ್ರಿಯೆ ನಡೆಸಲಾಯಿತು.


ಮಳೆಯಿಂದಾಗಿ ಪಂಜಿನ ಕವಾಯತು ಮೈದಾನದಲ್ಲಿ ಕೆಲವೆಡೆ ನೀರು ನಿಂತು ಕೆಸರುಮಯವಾಗಿದೆ. ಇದರಿಂದ ಸ್ಟಂಟ್ ಮಾಡುವ ವೇಳೆ ಬೈಕ್‌ಗಳು ಜಾರುವ ಸಂದರ್ಭವಿದೆ. ಹೀಗಾಗಿ, ಅಗತ್ಯವಿದ್ದ ಕಡೆ ಸಮತಟ್ಟು ಮಾಡುವಂತೆ ಸೂಚಿಸಲಾಗಿದೆ. ಮುಡಾ ವತಿಯಿಂದ ಮೈದಾನದಲ್ಲಿ ಸಮತಟ್ಟು ಕಾರ್ಯ ಮಾಡಲಾಯಿತು.

ಯಾವ ಸ್ಟಂಟ್?


7 ಬೈಕ್‌ಗಳಲ್ಲಿ 30 ಜನ ನಿಂತುಕೊಂಡು ಪಿರಮಿಡ್ ಮಾದರಿಯಲ್ಲಿ ಸಾಗಲಿದ್ದು, ಫೈರ್ ಜಂಪ್, ಶ್ವೇತ ಅಶ್ವ ಜಂಪ್, ಟ್ಯೂಬ್ ಲೈಟ್ ಜಂಪ್, ಸರ್ಕಲ್ ಎಕ್ಸ್‌ಸೈಜ್, ಓಪನಿಂಗ್ ಕ್ರಾಸಿಂಗ್, ಪ್ಯಾರಲ್ ಕ್ರಾಸಿಂಗ್, ಗ್ರೂಪ್ ಈವೆಂಟ್ ಸೇರಿದಂತೆ ವಿವಿಧ ಕಸರತ್ತು ಪ್ರದರ್ಶಿಸಲಾಗುತ್ತಿದೆ.

ಬುಲೆಟ್ ಮೇಲೆ ನಿಂತು, ಮಲಗಿ ಸಾಗುವುದು, ಬೈಕ್ ಚಲಿಸುವಾಗಲೇ ಅದರ ಸೀಟ್ ಮೇಲೆ ಮಲಗಿ ಈಜಾಡುವಂತೆ ಮಾಡುವುದು, ಚಲಿಸುವ ಬೈಕ್ ಮೇಲೆ ನಿಂತು ಸೆಲ್ಯೂಟ್ ಹೊಡೆಯುವುದು, ಬೈಕ್ ಚಲಿಸುವಾಗಲೇ ಏಣಿ ಏರುವುದು ಸೇರಿದಂತೆ ಇನ್ನಿತರ ಸ್ಟಂಟ್‌ಗಳು ಇರಲಿವೆ.