ಜಿಲ್ಲೆ

ಗಡಿನಾಡ ಕನ್ನಡಿಗನಿಗೆ ದಸರಾ ಉದ್ಘಾಟನೆ ಭಾಗ್ಯ

ಎನ್.ವೆಂಕಟೇಶ್

ಗೌರಿಬಿದನೂರು ತಾಲೂಕಿಗೆ 2ನೇ ಬಾರಿಗೆ ಒಲಿದ ಅದೃಷ್ಟ | ಹಲವು ದಿಗ್ಗಜರ ಸ್ಫೂರ್ತಿ ಪಡೆದವರು ಹಂಪನಾ


ಗೌರಿಬಿದನೂರು : ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಹಂ.ಪ. ನಾಗರಾಜಯ್ಯ ಅವರಿಗೆ ಈ ಬಾರಿ ನಾಡಹಬ್ಬ ದಸರಾ ಉದ್ಘಾಟನೆ ಅವಕಾಶ ಲಭಿಸಿದೆ. ಗಡಿನಾಡ ಕನ್ನಡಿಗನಿಗೆ ಈ ಅವಕಾಶ ಒಲಿದು ಬಂದಿರುವುದು ಈ ಭಾಗದ ಕನ್ನಡಿಗರಿಗೆ ಖುಷಿ ತಂದಿದೆ.
ಹಂ.ಪ.ನಾ. ಎಂದೇ ಚಿರಪರಿಚಿತರಾದ ಹಂ.ಪ. ನಾಗರಾಜಯ್ಯ ಅವರು ಗೌರಿಬಿದನೂರು ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ 1939ರ ಅ.7ರಂದು ಜನಿಸಿದರು. ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳ ಪೈಕಿ ನಾಗರಾಜಯ್ಯ ಅವರೇ ಹಿರಿಯ ಪುತ್ರ. ಕಿರಿಯ ಪುತ್ರ ಧರಣೇಂದ್ರಯ್ಯ ಇಂದಿಗೂ ಹಂಪಸಂದ್ರದಲ್ಲಿ ವಾಸವಾಗಿದ್ದಾರೆ.


ಗಡಿನಾಡ ನಾಡೋಜ
ಆಂಧ್ರದ ಗಡಿಗೆ ಹೊಂದಿಕೊಂಡಿರುವ ತೆಲುಗು ಪ್ರಭಾವವುಳ್ಳ ತಾಲೂಕಿನಲ್ಲಿ ಜನಿಸಿದ ನಾಗರಾಜಯ್ಯ ಅವರು ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತಂದೆ ಶಾನುಭೋಗ ಪದ್ಮನಾಭಯ್ಯ ಮತ್ತು ತಾಯಿ ಪದ್ಮಾವತಮ್ಮ. ಮನೆಯಲ್ಲಿ ತಂದೆ ನಡೆಸುತ್ತಿದ್ದ ವಿದ್ವತ್ಪೂರ್ಣ ಪ್ರವಚನಗಳು ಹಂಪನಾ ಅವರ ಮೇಲೆ ಅಪಾರ ಪ್ರಭಾವ ಬೀರಿದವು. ಮೊದಲಿಗೆ ಗೌರಿಬಿದನೂರು ಮಂಡ್ಯ, ಮಧುಗಿರಿ, ತುಮಕೂರುಗಳಲ್ಲಿ ಕಾಲೇಜುವರೆಗಿನ ವಿದ್ಯಾಭ್ಯಾಸ ಮುಗಿಸಿದರು. ಬಳಿಕ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದು ಎಂ.ಎ. ವ್ಯಾಸಂಗಕ್ಕೆ ಸೇರಿ ಕುವೆಂಪು, ತೀ.ನಂ. ಶ್ರೀಕಂಠಯ್ಯ, ಡಿ.ಎಲ್.ನರಸಿಂಹಾಚಾರ್, ಎಸ್.ವಿ.ಪರಮೇಶ್ವರ ಭಟ್ಟ, ಕೆ.ವೆಂಕಟರಾಮಪ್ಪ, ದೇ.ಜವರೇಗೌಡ ಮುಂತಾದ ಸಾಹಿತ್ಯ ದಿಗ್ಗಜರ ನೆರಳಿನಲ್ಲಿ ಸ್ಫೂರ್ತಿ ಪಡೆದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಹಾಗೂ ವಡ್ಡಾರಾಧನೆ ಸಮಗ್ರ ಅಧ್ಯಯನಕ್ಕಾಗಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು.

ವೃತ್ತಿ ಜೀವನ
1959ರಿಂದ 1970ರವರೆಗೆ ಮೈಸೂರಿನ ಮಹಾರಾಣಿ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು, ಮಂಡ್ಯ, ದಾವಣಗೆರೆ, ಬೆಂಗಳೂರಿನ ಸರ್ಕಾರಿ ಕಾಲೇಜುಗಳಲ್ಲಿ ಪದವಿ ತರಗತಿಗಳಲ್ಲಿ ಕನ್ನಡ ವಿಷಯ ಬೋಧಿಸಿದರು. 1970ರಿಂದ 1996ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ವೃತ್ತಿ ಕೈಗೊಂಡು ಸ್ನಾತಕೋತ್ತರರಿಗೆ ಬೋಧನೆ ಮಾಡಿದರು. ಬೆಂಗಳೂರು ವಿವಿಯಲ್ಲಿದ್ದಾಗಲೇ ಕಲಾವಿಭಾಗದ ಮುಖ್ಯಸ್ಥರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ದುಡಿದರು. ವಿವಿಧ ಅವಧಿಗಳಲ್ಲಿ ಜೈನ ಸಂಶೋಧನಾ ಕೇಂದ್ರ, ಜೈನ ಅಧ್ಯಯನ ಸಂಸ್ಥೆ, ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಹಲವು ಪ್ರಶಸ್ತಿಗೆ ಭಾಜನ
ಹಂಪನಾ ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಯಿಂದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ನಾಡೋಜ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮಕ್ಕಳ ಸಾಹಿತ್ಯಕ್ಕಾಗಿ ನೀಡಲಾಗುವ ರಾಷ್ಟ್ರೀಯ ಪುರಸ್ಕಾರ, ಚಾವುಂಡರಾಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಾಸನ ಸಾಹಿತ್ಯ ಪ್ರಶಸ್ತಿ, ಚಿ.ನ.ಮಂಗಳಾ ಪ್ರಶಸ್ತಿಗಳು ಇವರ ಮುಡಿಗೇರಿವೆ.

ಪತ್ನಿ ಕಮಲಾ ಹಂಪನಾ
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಕಮಲಾ ಹಂಪನಾ ಅವರು ಹಂ.ಪ.ನಾಗರಾಜಯ್ಯ ಅವರ ಪತ್ನಿ. ಪತಿ-ಪತ್ನಿ ಇಬ್ಬರೂ ಕನ್ನಡ ಸಾಹಿತ್ಯ ಲೋಕಕ್ಕೆ ದುಡಿದವರು. ನೆರೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದ ಕಮಲಾ ಅವರು ವೃತ್ತಿ ಜೀವನದಲ್ಲಿ ನಾಗರಾಜಯ್ಯನವರ ಜತೆಗೂಡಿ ಅನೇಕ ಕಡೆ ಸೇವೆ ಸಲ್ಲಿಸಿದ್ದಾರೆ. ನಾಗರಾಜಯ್ಯ ಜೈನ ಸಮುದಾಯಕ್ಕೆ ಸೇರಿದವರು. ಕಮಲಾ ನಾಯಕ ಸಮುದಾಯಕ್ಕೆ ಸೇರಿದವರು. ಇಬ್ಬರೂ ಅಂತರ್ಜಾತಿ ವಿವಾಹವಾಗುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದರು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನಿದ್ದಾನೆ.
ಕಮಲಾ ಅವರು ಕಳೆದ ಜೂ.22ರಂದು ನಿಧನರಾಗಿದ್ದು, ಹಂ.ಪ.ನಾಗರಾಜಯ್ಯ ಅವರು ಬಹು ಎತ್ತರಕ್ಕೆ ಬೆಳೆದರೂ ತವರೂರನ್ನು ಮರೆತವರಲ್ಲ. ಹಬ್ಬ ಹರಿದಿನಗಳಲ್ಲಿ ಇಲ್ಲಿಗೆ ತಪ್ಪದೆ ಭೇಟಿ ನೀಡುತ್ತಾರೆ.

2ನೇ ಬಾರಿ ಅವಕಾಶ
ನಾಡಹಬ್ಬ ದಸರಾ ಉದ್ಘಾಟಿಸುವ ಅವಕಾಶ ಗೌರಿಬಿದನೂರು ತಾಲೂಕಿನವರಿಗೆ ಎರಡನೇ ಬಾರಿಗೆ ಒಲಿದು ಬಂದಂತಾಗಿದೆ. ಈ ಮೊದಲು ತಾಲೂಕಿನವರೇ ಆದ ಶಿಕ್ಷಣತಜ್ಞ, ಹಿರಿಯ ಗಾಂಧೀವಾದಿ ದಿ. ಡಾ.ಎಚ್.ನರಸಿಂಹಯ್ಯ(ಎಚ್.ಎನ್.ಮೇಷ್ಟ್ರು) ಅವರಿಗೆ ಒಲಿದು ಬಂದಿತ್ತು. ಈಗ 2ನೇ ಬಾರಿಗೆ ಹಂಪಸಂದ್ರದ ನಾಗರಾಜಯ್ಯ ಅವರಿಗೆ ಒಲಿದಿದೆ.

ನಮ್ಮ ಸೀಮೆಯ ಡಾ.ಹಂಪನಾ ಅವರಿಗೆ ಈ ಕೀರ್ತಿ ಎಂದೋ ಸಿಗಬೇಕಿತ್ತು. ಈಗಲಾದರೂ ಈ ಗೌರವ ದೊರೆತಿರುವುದು ಸಂತೋಷ. ಆಯ್ಕೆ ಮಾಡಿದ ಸರ್ಕಾರಕ್ಕೆ ಧನ್ಯವಾದಗಳು.| ಎನ್.ವಿ.ಗೌರೀಶ್, ಕನ್ನಡ ಪರಿಚಾರಕ, ಗೌರಿಬಿದನೂರು
ಸಾಂಸ್ಕೃತಿಕ ನಗರಿಯಲ್ಲಿ ನಡೆಯಲಿರುವ ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನೆಗೆ ನಮ್ಮೂರಿನ ಮೇರು ಸಾಹಿತಿ ಡಾ. ಹಂ.ಪ. ನಾಗರಾಜಯ್ಯ ಅವರು ಆಯ್ಕೆಯಾಗಿರುವುದು ಸಂತಸ ತಂದಿದೆ. ಇದು ನಮ್ಮೂರಿನ ಜನತೆಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಎರಡು ಬಾರಿ ದಸರಾ ಉದ್ಘಾಟನೆ ಭಾಗ್ಯ ನಮ್ಮ ಹೊಸೂರು ಹೋಬಳಿಯ ಪಾಲಿಗೆ ದೊರತಿರುವುದು ಸಂತೋಷದ ವಿಚಾರ. ಮುಖ್ಯಮಂತ್ರಿಗಳಿಗೆ ಕೃತಜ್ಞತೆಗಳು.| ಎಚ್. ವಿ. ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ