ಮೈಸೂರು: ದಸರಾ ಮಹೋತ್ಸವದಲ್ಲಿ ಗೋಲ್ಡ್ ಕಾರ್ಡ್ ಸೇರಿದಂತೆ ಟಿಕೆಟ್‌ಗಳು ಸಾರ್ವಜನಿಕರಿಗೆ ಸಿಗದಂತೆ ವಂಚನೆ ಮಾಡಲಾಗುತ್ತಿದೆ ಎಂದು ವಾಯ್ಸ್ ಆಫ್ ಪೀಪಲ್ ಸಂಸ್ಥೆ ಸಂಸ್ಥಾಪಕ ಎ.ವಸಂತರಾವ್ ಚವಾಣ್ ಆರೋಪಿಸಿದರು.
ಕಳೆದ ಬಾರಿಯ ದಸರಾ ವೇಳೆ ಖರೀದಿ ಪಾಸ್‌ಗಳನ್ನು ಆನ್‌ಲೈನ್ ಮೂಲಕ ಮಾತ್ರವೇ ಮಾರಾಟ ಮಾಡಲಾಗುವುದು, ಆಫ್‌ಲೈನ್‌ನಲ್ಲಿ ಖರೀದಿಗೆ ಅವಕಾಶವಿಲ್ಲ ಎಂದು ಡಿಸಿ ತಿಳಿಸಿದ್ದರು. ಆದರೆ ಆನ್‌ಲೈನ್ ಮಾರಾಟ ಶುರುವಾದ ಕೆಲವೇ ನಿಮಿಷಗಳಲ್ಲಿ ಸರ್ವರ್ ಸಮಸ್ಯೆ ಎಂದು ತೋರಿಸಿ, ರಾಜಕಾರಣಿಗಳು, ಅಧಿಕಾರಿ ವರ್ಗಕ್ಕೆ ನೀಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಇದರಿಂದಾಗಿ ಜನಸಾಮಾನ್ಯರು ಪಾಸ್ ಮೂಲಕ ದಸರಾ ನೋಡದಂತಾಯಿತು. ಈ ಅವ್ಯವಹಾರದಿಂದಾಗಿ ಬೊಕ್ಕಸಕ್ಕೆ ಸುಮಾರು 2.63 ಕೋಟಿ ರೂ. ನಷ್ಟವಾಗಿದೆ. ಈ ವೇಳೆ ಜನಸಾಮಾನ್ಯರಿಗೆ ಕೇವಲ 4,617 ಟಿಕೆಟ್ ನೀಡಿ, ರಾಜಕಾರಣಿಗಳು ಹಾಗೂ ಅಧಿಕಾರಿ ವರ್ಗಕ್ಕೆ 54,157 ಟಿಕೆಟ್ ನೀಡಲಾಗಿದೆ ಎಂದು ದೂರಿದರು.
ಈ ಬಗ್ಗೆ ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಲೋಕಾಯುಕ್ತರು ಹಾಗೂ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸುವ ಜತೆಗೆ ಈ ಬಾರಿ ಸರಿಯಾದ ವ್ಯವಸ್ಥೆ ಮಾಡುವಂತೆ ಕೋರಲಾಗಿದೆ ಎಂದು ಹೇಳಿದರು.
ವಾಯ್ಸ್ ಆಫ್ ಪೀಪಲ್ ಸಂಸ್ಥೆಯ ಸುಜಯ್ ಕುಮಾರ್‌ಸಿಂಗ್, ರಾಕೇಶ್, ಅರ್ಜುನ್, ಪ್ರದೀಪ್ ಇದ್ದರು.