ಜಿಲ್ಲೆ

ಅ.15ರಿಂದ ದಸರಾ ಫಲಪುಷ್ಪ ಪ್ರದರ್ಶನ

ಮೈಸೂರುL ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ 15ರಿಂದ 24ರವರೆಗೆ ಎಂದಿನಂತೆ ದಸರಾ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
ಈ ಬಾರಿ ಚಂದ್ರಯಾನ-3, ಕ್ರಿಕೆಟ್, ಚಾಮುಂಡೇಶ್ವರಿ ದೇವಾಲಯ ಗೋಪುರ, 11 ಅಡಿ ಚಾಮುಂಡೇಶ್ವರಿ ಮೂರ್ತಿ, ಸುವರ್ಣ ಕರ್ನಾಟಕ, ಅಂಬಾರಿ ಮಾದರಿ ಹೂವಿನ ಕಲಾಕೃತಿ, ಕಾಫಿ ಕಪ್, ಸಂವಿಧಾನದ ಪೀಠಿಕೆ, ನಾಲ್ವಡಿ ಸೇರಿ ಅನೇಕ ಸಂದೇಶ ಸಾರುವ ಆಕೃತಿಗಳ ಪ್ರದರ್ಶನ ಇರಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರಿ ಇಲಾಖೆಗಳು, ಖಾಸಗಿ ಕಂಪನಿಗಳು, ಕಾಲೇಜು, ನಿಗಮಮಂಡಳಿ, ವಿಶ್ವವಿದ್ಯಾಲಯಗಳು ಸೇರಿದಂತೆ ನಾನಾ ಸಂಸ್ಥೆಗಳಿಂದ ಹೂ ಕುಂಡಗಳ ಜೋಡಣೆ, ತೋಟಗಾರಿಕೆ ಪ್ರದರ್ಶನ ಇರಲಿದೆ. ಇಕೆಬಾನ, ತರಕಾರಿ ಕೆತ್ತನೆ, ಸೃಜನಾತ್ಮಕ ಸ್ಪರ್ಧೆ ಸಹ ಇರಲಿದೆ ಎಂದು ಹೇಳಿದರು.
ಭೂ ವಿನ್ಯಾಸಗಾರರು, ತೋಟಗಾರಿಕೆ ಸೇವೆ ಸಲ್ಲಿಸುವವರು, ವಿವಿಧ ನರ್ಸರಿಗಳಿಂದ ಭಾಗವಹಿಸಲಿದ್ದಾರೆ. ನಿತ್ಯ ವಿವಿಧ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗುವುದು. 20 ಅಡಿಯ ಚಾಮುಂಡೇಶ್ವರಿ ದೇವಸ್ಥಾನದ ಗೋಪುರ, 11 ಅಡಿಯ ದೇವಿಯ ಮೂರ್ತಿ ನಿರ್ಮಿಸುತ್ತಿರುವುದು ಈ ಬಾರಿಯ ವಿಶೇಷ ಎಂದು ತಿಳಿಸಿದರು.