ಅವಿನಾಶ್ ಜೈನಹಳ್ಳಿ ಮೈಸೂರು
ಲಿಂಗತ್ವ ಅಲ್ಪಸಂಖ್ಯಾತರಿಗೆ ಆಟೋಟ ಸ್ಪರ್ಧೆ, ರಂಗೋಲಿ ಚಿತ್ತಾರ, ಒಲೆರಹಿತ ಅಡುಗೆ ಸ್ಪರ್ಧೆ, ನಾನಾ ಸಾಂಸ್ಕೃತಿಕ ಕಾರ್ಯಕ್ರಮ…
ಇದು ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮಹಿಳಾ ಮತ್ತು ಮಕ್ಕಳ ದಸರಾದ ನಿರೀಕ್ಷಿತ ಕಾರ್ಯಕ್ರಮಗಳ ಪಟ್ಟಿ.
ಸೆ. 27ರಿಂದ ಅ. 1ರವರೆಗೆ ‘ಮಹಿಳಾ ಮತ್ತು ಮಕ್ಕಳ ದಸರಾ’ ನಡೆಯಲಿದ್ದು, ಮಹಿಳೆಯರು ಮತ್ತು ಮಕ್ಕಳು ದಸರಾಕ್ಕೆ ರಂಗು ನೀಡಲು ಮುಂದಾಗಿದ್ದಾರೆ. ಮಹಾಮಾರಿ ಕರೊನಾದಿಂದಾಗಿ ಎರಡು ವರ್ಷದಿಂದ ಕಳೆಗುಂದಿದ್ದ ದಸರಾ ಮಹೋತ್ಸವಕ್ಕೆ ಈ ಬಾರಿ ಜೀವಕಳೆ ಬಂದಿದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಮಹಿಳಾ ಮತ್ತು ಮಕ್ಕಳ ದಸರಾವನ್ನು ಪ್ರಸಕ್ತ ವರ್ಷ ವಿಭಿನ್ನ ರೀತಿಯಲ್ಲಿ ಆಯೋಜಿಸಲು ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಮುಂದಾಗಿದೆ. ಈ ಸಂಬಂಧ ಮಹಿಳೆಯರಿಗೆ ಅನುಕೂಲವಾಗುವ ಹಾಗೂ ಮಕ್ಕಳು, ಮಹಿಳೆಯರು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಮನರಂಜನೆ ನೀಡುವಂತಹ ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಸಬಲೀಕರಣದ ಆಶಯದೊಂದಿಗೆ ಮಹಿಳಾ ಹಾಗೂ ಮಕ್ಕಳ ದಸರಾ ಆಯೋಜಿಸಲು ತೀರ್ಮಾನಿಸಲಾಗಿದೆ. ನಾನಾ ಸ್ಪರ್ಧೆ, ಭರಪೂರ ಮನರಂಜನೆಯ ಜತೆಗೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಈ ಬಾರಿ ವಿಶೇಷವಾಗಿ ಲಿಂಗತ್ವ ಅಲ್ಪಸಂಖ್ಯಾತರನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೂ ಜೋಶ್ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ.
ಮೂರು ದಿನ ಮಹಿಳಾ ದಸರಾ:
5 ದಿನಗಳ ಪೈಕಿ ಮೂರು ದಿನ ಮಹಿಳಾ ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ. 27ರಿಂದ 29ರವರಗೆ ಮಹಿಳೆಯರಿಗಾಗಿ ನಾನಾ ಕಾರ್ಯಕ್ರಮ ಜರುಗಲಿವೆ. ಜೆ.ಕೆ. ಮೈದಾನದಲ್ಲಿ 27ರಂದು ಉದ್ಘಾಟನಾ ಕಾರ್ಯ ಕ್ರಮ ನಡೆಯಲಿದೆ. ಮೊದಲ ದಿನ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಎಲ್ಲರನ್ನು ಆಕರ್ಷಿಸಲಿದೆ. ಉದ್ಘಾ ಟನೆಗೂ ಮುನ್ನ ರಂಗೋಲಿ ಸ್ಪರ್ಧೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಬೆಳ್ಳಂಬೆಳಗ್ಗೆ ನಡೆಯುವ ನಿರೀಕ್ಷೆ ಇದೆ. ಸ್ಪರ್ಧೆಯಲ್ಲಿ ಗೆಲುವು ಪಡೆಯುವ ಮಹಿಳೆಯರಿಗೆ ಆಕರ್ಷಕ ಬಹುಮಾನವೂ ಇರಲಿದೆ. ಮೊದಲ ದಿನ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಮಂದಿರದ ಮಕ್ಕಳಿಂದ ಮೆರವಣಿಗೆ ನಡೆಯಲಿದೆ. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣವಾಗಲಿದೆ.
ಎರಡನೇ ದಿನ ಮಹಿಳೆಯರಿಗೆ ಪದಗಳೊಂದಿಗೆ ರಾಗಿ ಬೀಸುವ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತರು ರಾಗಿ ಬೀಸುವ ಕಲ್ಲನ್ನು ತಾವೇ ತಂದು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಎಲ್ಲ ಮಹಿಳೆಯರು ಜಾನಪದ ಸೇರಿದಂತೆ ನಾನಾ ಪದಗಳನ್ನು ಹಾಡುತ್ತ್ತ ರಾಗಿ ಬೀಸಬೇಕಾಗಿದೆ. ಮಹಿಳೆಯರಿಗೆ ವೇಷಭೂಷಣ ಸ್ಪರ್ಧೆ, ಒಲೆ ರಹಿತ ಅಡುಗೆ ಸ್ಪರ್ಧೆ ನಡೆಯಲಿದೆ. ವಿಶೇಷವಾಗಿ ಎರಡನೇ ದಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ನಾನಾ ಸ್ಪರ್ಧೆ ಆಯೋಜಿಸಲಾಗಿದೆ. ಲೆಮೆನ್ ಆ್ಯಂಡ್ ಸ್ಪೂನ್, ಮಡಕೆ ಒಡೆಯುವ ಸ್ಪರ್ಧೆ ಸೇರಿದಂತೆ ನಾನಾ ಆಟೋಟ ನಡೆಯಲಿವೆ. ಬಳಿಕ ಲಿಂಗತ್ವ ಅಲ್ಪಸಂಖ್ಯಾತರಿಂದ ನೃತ್ಯ ಮತ್ತು ನಾಟಕ ಪ್ರದರ್ಶನಗೊಳ್ಳಲಿದೆ. ಗೋಪಿ ಸೇರಿದಂತೆ ಮಿಮಿಕ್ರಿ ಕಲಾವಿದರಿಂದ ಮಿಮಿಕ್ರಿ ಕಾರ್ಯಕ್ರಮ, ನಾಟಕ ರಂಗ ಟ್ರಸ್ಟ್ ಮೈಸೂರು ವತಿಯಿಂದ ‘ಇವಳಜ್ಜಿ ಅದಮಜ್ಜಿ’ ನಾಟಕ ಪ್ರದರ್ಶನ ಆಯೋಜಿಸಲು ಚಿಂತಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ನಾನಾ ಸ್ಪರ್ಧೆ:
ಮೂರನೇ ದಿನ ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಇಲಾಖೆ ಸಿಬ್ಬಂದಿ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ನಾನಾ ಆಟೋಟ ಆಯೋಜಿಸಲು ಚಿಂತಿಸಲಾಗಿದೆ. ವಿಶೇಷವಾಗಿ ನೀರು ತುಂಬಿದ ಬಿಂದಿಗೆಯನ್ನು ಹೊತ್ತು ನಡೆಯುವ ಸ್ಪರ್ಧೆ, ಲೆಮೆನ್ ಆ್ಯಂಡ್ ಸ್ಪೂನ್, ಬಲೂನ್ ಊದುವ ಸ್ಪರ್ಧೆ, ಜಾನಪದ ಗೀತೆ ಗಾಯನ ಸ್ಪರ್ಧೆ, ಕೇಶವಿನ್ಯಾಸ ಸ್ಪರ್ಧೆ, ಜಾನಪದ ಸಮೂಹ ನೃತ್ಯ ಸ್ಪರ್ಧೆ ನಡೆಯಲಿವೆ. ಬಳಿಕ ಸುಧಾ ಬರಗೂರು ಅವರಿಂದ ಚುಟುಕು ಹಾಸ್ಯ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ.
ವಸ್ತು ಪ್ರದರ್ಶನ:
ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಜೆ.ಕೆ. ಮೈದಾನದಲ್ಲಿ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲು ಚಿಂತಿಸಲಾಗಿದೆ. ಪ್ರದರ್ಶನದಲ್ಲಿ 40 ಮಳಿಗೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳು ತಾವು ತಯಾರಿಸುವ ವಸ್ತುಗಳನ್ನು ಇಲ್ಲಿ ಪ್ರದರ್ಶಿಸುವ ಜತೆಗೆ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಬಸವರಾಜು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಈ ಬಾರಿ ಮಹಿಳಾ ಮತ್ತು ಮಕ್ಕಳ ದಸರಾವನ್ನು ವಿಶೇಷ ರೀತಿ ಆಯೋಜಿಸಲು ಚಿಂತಿಸಲಾಗಿದೆ. ಸೆ. 27ರಿಂದ 29 ರವರೆಗೆ ಮಹಿಳಾ ದಸರಾ ನಡೆಯಲಿದೆ. ಸೆ.30 ಮತ್ತು ಅ. 1ರಂದು ಮಕ್ಕಳ ದಸರಾ ಆಯೋಜಿಸಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಆಟೋಟ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಒಲೆ ರಹಿತ ಅಡುಗೆ ಸ್ಪರ್ಧೆ, ನಾನಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.ಬಸವರಾಜು, ಕಾರ್ಯಾಧ್ಯಕ್ಷರು, ಮಹಿಳಾ ಮತ್ತು ಮಕ್ಕಳಾ ದಸರಾ ಉಪ ಸಮಿತಿ