ಚಿಕ್ಕಬಳ್ಳಾಪುರ : ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 9 ದಿನಗಳ ಕಾಲ ಹಮ್ಮಿಕೊಂಡಿರುವ ದಸರಾ ಮಹೋತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದಲ್ಲಿ ಅ.3ರಿಂದ ಅ.12 ರವರೆಗೆ ಆಯೋಜಿಸಿರುವ ಕಾರ್ಯಕ್ರಮವು ಗಣಪತಿ, ನವಗ್ರಹ ಸೇರಿ, ಹೋಮ ಹವನ, ವಿಶೇಷ ಪೂಜೆಯೊಂದಿಗೆ ಪ್ರಾರಂಭವಾಯಿತು.
ಆಗಮಿಕ ಪಂಡಿತರ ವೇದಮಂತ್ರಗಳ ಘೋಷಣೆ, ದುರ್ಗಾರಾಧನೆಗೆ ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಕಲಾ ತಂಡದ ವಾದನ, ದುರ್ಗಾರಾಧಕರು ಭಕ್ತಿಪರವಶರಾಗಿ ದುರ್ಗಾಮಾತೆಗೆ ಆರತಿ ಬೆಳಗುವಿಕೆ, ದೇವರ ನಾಮಸ್ಮರಣೆಯೊಂದಿಗೆ ನರ್ತನ ಗಮನ ಸೆಳೆಯಿತು. ಇನ್ನೂ ದೇಶ ವಿದೇಶಗಳಿಂದ ಸಾಯಿಬಾಬಾ ಭಕ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಹೋತ್ಸವದ ಅಂಗವಾಗಿ ಸತ್ಯಸಾಯಿ ಹದಯ ಮಂದಿರದ ಮುಂಭಾಗದಲ್ಲಿ ವ್ಯವಸ್ಥೆಗೊಂಡ ಯಜ್ಞ ಶಾಲೆಯನ್ನು ದುರ್ಗಾವಾತೆಯ ಮೂಲ ನೆಲೆ ಎಂಬಂತೆ ಮರು ಸೃಷ್ಟಿಸಲಾಗಿದೆ. ಪಶ್ಚಿಮ ಬಂಗಾಳದ ಉತ್ತರ ಕೋಲ್ಕತದ ಕುಮರ್ತುಲಿ ನದಿಯ ಆವೆ ಮಣ್ಣಿನಿಂದ ತಯಾರಿಸಿದ ದುರ್ಗಾ ಮಾತೆ, ಗಣಪತಿ ಸೇರಿ ದೇವರ ಆಕರ್ಷಕ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಸ್ವಾಗತ ಕಮಾನು, ಕಲಾಕೃತಿಗಳು, ವರ್ಣಾಲಂಕಾರ, ವಿದ್ಯುದ್ದೀಪಾಲಂಕಾರ ಹಬ್ಬಕ್ಕೆ ಹೊಸ ಮೆರುಗು ನೀಡಿವೆ.
ಮೂಲ ಸಂಸ್ಕೃತಿಗೆ ಧಕ್ಕೆಯಾಗದಿರಲಿ
ಸಂಸ್ಕೃತಿಯ ಪರಂಪರೆಯನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗುವ ಉದ್ದೇಶದಿಂದ ಸಂಪ್ರದಾಯಗಳು ಮತ್ತು ಆಚರಣೆಗಳು ಇರುತ್ತವೆ. ಇವುಗಳಿಗೆ ಹೊಸ ಅಭಿವೃದ್ಧಿ ಬೆಳವಣಿಗೆಗಳು ಧಕ್ಕೆಯನ್ನುಂಟು ಮಾಡಬಾರದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಸಲಹೆ ನೀಡಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಪ್ರಕೃತಿಯು ಪ್ರತಿಯೊಬ್ಬರಿಗೂ ಯಥೇಚ್ಛವಾದ ನಾನಾ ಸವಲತ್ತುಗಳ ಸೌಭಾಗ್ಯವನ್ನು ನೀಡಿದೆ. ಇದನ್ನು ಮನುಷ್ಯ ಕತಜ್ಞತೆಯ ರೂಪದಲ್ಲಿ ಸ್ವೀಕರಿಸಬೇಕು ಎಂದರು. ಸಷ್ಟಿ, ಸ್ಥಿತಿ, ಲಯಗಳೆಂಬ ಅಂಶಗಳು ಸತ್ಯಂ ಶಿವಂ ಸುಂದರಂ ಎಂಬುದಾಗಿ ದೇಶದ ಪರಂಪರೆಯಲ್ಲಿ ಬೆರೆತುಹೋಗಿವೆ. ಇವುಗಳ ಸಂಯೋಜಿತ ಸಮಭಾವವೇ ಭಾರತೀಯತ್ವ. ಎಷ್ಟೇ ಸ್ಥಿತ್ಯಂತರಗಳು ಸಂಭವಿಸಿದರೂ ಭಾರತೀಯತೆ ವಾತ್ರ ಯಥಾ ಪ್ರಕಾರ ನಡೆದು ಬಂದಿರುವುದಕ್ಕೆ ಸಂಸ್ಕೃತಿ, ಸಂಪ್ರದಾಯ ಆಚರಣೆಗಳೇ ಪ್ರಮುಖ ಕಾರಣ ಎಂದರು. ಅನೇಕಾನೇಕ ಸಾಂಕ್ರಾಮಿಕಗಳು ಹಲವಾರು ದೇಶಗಳ ಸಂಸ್ಕೃತಿಯನ್ನು ಸರ್ವನಾಶಗೊಳಿಸಿವೆ. ಆದರೆ, ಭಾರತೀಯತೆಗೆ ಕುಂದು ಬಂದಿಲ್ಲ. ಕಾಲಕ್ಕೆ ತಕ್ಕಂತೆ ಅಭಿವದ್ಧಿ ಕಾಣಬೇಕು. ಆದರೆ, ಇದು ಸಂಸ್ಕೃತಿಯ ಮೂಲಸೆಲೆಗೆ ಅನುಗುಣವಾಗಿ ಇರಬೇಕು. ಯಥಾಸ್ಥಿತಿಯನ್ನು ಕಾಪಾಡಿಕೊಂಡು ಮತ್ತಷ್ಟು ಉತ್ತಮಗೊಳಿಸಬೇಕು ಎಂದರು. ಸತ್ಯಸಾಯಿ ವಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎಂ.ನರಸಿಂಹಮೂರ್ತಿ ಇದ್ದರು.