ಶಿವಮೊಗ್ಗ ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಾಡಹಬ್ಬ ಶಿವಮೊಗ್ಗ ದಸರಾ ಮಹೋತ್ಸವಕ್ಕೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಚಾಲನೆ ನೀಡಿದರು. ಎಸ್.ಎನ್.ಚನ್ನಬಸಪ್ಪ, ಎಚ್.ಎಸ್.ಯೋಗೇಶ್, ನಾಗರಾಜ್ ಕಂಕಾರಿ, ಎಸ್.ಜ್ಞಾನೇಶ್ವರ್, ಅನಿತಾ ರವಿಶಂಕರ್, ಕೆ.ಮಾಯಣ್ಣಗೌಡ ಉಪಸ್ಥಿತರಿದ್ದರು. 
ಜಿಲ್ಲೆ

ಧರ್ಮ, ಸತ್ಯದ ಜಯವೇ ದಸರಾ ಆಚರಣೆ

ಶಿವಮೊಗ್ಗ: ಧರ್ಮ ಮತ್ತು ಸತ್ಯದ ಜಯವೇ ದಸರಾ ಆಚರಣೆ. ಅನ್ಯಾಯ ಎಷ್ಟೇ ಬಲಿಷ್ಠವಾಗಿದ್ದರೂ ಸೋಲಲೇಬೇಕು. ಹಬ್ಬಗಳ ಆಚರಣೆಯು ನಮ್ಮ ಸಂಸ್ಕೃತಿಯ ಜೀವಂತಿಕೆಗೆ ಸಾಕ್ಷಿಯಾಗಿವೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ್ ರಾಜು ಬಣ್ಣಿಸಿದರು.

ನಗರದ ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಶಿವಮೊಗ್ಗ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಾಡಹಬ್ಬ ಶಿವಮೊಗ್ಗ ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಬ್ಬಗಳು ಸಂಸ್ಕೃತಿ, ಶಿಸ್ತು, ತ್ಯಾಗವನ್ನು ಕಲಿಸುತ್ತವೆ. ಸತ್ಯ, ಪ್ರಾಮಾಣಿಕತೆ, ಸೇವಾಭಾವ ನಿಜವಾದ ಆಚರಣೆ ಆಗಬೇಕು. ನಾವೆಲ್ಲರೂ ಮೌಲ್ಯಗಳನ್ನು ಕಾಪಾಡಬೇಕಿದ್ದು, ಹಬ್ಬಗಳಲ್ಲಿ ಶಿಸ್ತು ಪಾಲಿಸಬೇಕು ಎಂದರು.

ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು. ನಮ್ಮ ದೇಶ ಮುಂದೆ ಬರಲು ಸ್ವಚ್ಛತೆ ಬಹಳ ಮುಖ್ಯವಾಗುತ್ತದೆ. ಸಿಂಗಾಪುರದಲ್ಲಿ ಅಲ್ಲಿನ ಸರ್ಕಾರ, ಜನತೆ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಾರೆ. ಆ ಕಾರಣಕ್ಕಾಗಿ ಸಿಂಗಾಪುರ ಅಭಿವೃದ್ಧಿ ಹೊಂದಿದೆ. ಯಾರು ಸ್ವಚ್ಛತೆಗೆ ಆದ್ಯತೆ ನೀಡುವರೋ ಆ ಗ್ರಾಮ, ರಾಜ್ಯ, ದೇಶ ಅಭಿವೃದ್ಧಿ ಪಥದಲ್ಲಿ ಮುಂದುವರಿಯಲಿದೆ ಎಂದು ಆಶಿಸಿದರು.

ಶಂಕರಾನಂದ ಜೋಯ್ಸ ವೇದಘೋಷ ಪಠಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಆಯುಕ್ತ ಕೆ.ಮಾಯಣ್ಣ ಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಚ್.ಎಂ.ಮಧು, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಚ್.ಎಸ್.ಯೋಗೀಶ್, ರೇಖಾ ರಂಗನಾಥ, ಎಸ್.ಜ್ಞಾನೇಶ್ವರ್, ಮೋಹನ್ ರೆಡ್ಡಿ, ಯಮುನಾ ರಂಗೇಗೌಡ, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಗೋವಿಂದ, ಲಕ್ಷ್ಮಣ ಮತ್ತಿತರರು ಉಪಸ್ಥಿತರಿದ್ದರು.