ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮಂಗಳವಾರಪೇಟೆಯ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ದೇವಸ್ಥಾನದಲ್ಲಿನ ಶ್ರೀ ವಾಸವಿ ಅಮ್ಮನವರಿಗೆ ನಿತ್ಯ ಕ್ಷೀರಾಭಿಷೇಕ ವಿವಿಧ ಅಲಂಕಾರಗಳನ್ನು ಮಾಡಲಾಗಿತ್ತು. ವಿಜಯದಶಮಿ ದಿನದಿಂದ ದೇವಿಗೆ ರಾಜರಾಜೇಶ್ವರಿ ಅಲಂಕಾರ ಮಾಡಲಾಗಿತ್ತು. ಭಕ್ತರಿಂದ ಉತ್ಸವ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆಗಳು ಸಹ ನೆರವೇರಿದವು.
ವಿಜಯದಶಮಿಯಂದು ವೆಂಕಟೇಶ ಪುರಾಣ ವಾಚನ, ಬನ್ನಿ ಮುಡಿಯುವ ಕಾರ್ಯಕ್ರಮದ ಜತೆಗೆ ದಾಂಡಿಯಾ, ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಉತ್ಸವದ 9 ದಿನಗಳಲ್ಲಿ ನಗರದ ನಾನಾ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ದೇವಿ ದರ್ಶನ ಪಡೆದು ಭಕ್ತಿ ಪರವಶರಾದರು. ಸರಸ್ವತಿ ಕೃಪೆಗಾಗಿ ಚಿಕ್ಕಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭೋತ್ಸವ ಸಹ ನಡೆಸಿದ್ದು ವಿಶೇಷವಾಗಿತ್ತು.
ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಈರಣ್ಣ ವೆಂ.ಆಕಳವಾಡಿ, ಉಪಾಧ್ಯಕ್ಷ ಸುಭಾಸ ಆಕಳವಾಡಿ, ಕಾರ್ಯದರ್ಶಿ ರವೀಂದ್ರ ಆಕಳವಾಡಿ, ಸಹಕಾರ್ಯದರ್ಶಿ ಮಾಲತೇಶ ದೊಡಮನಿ, ಕೋಶಾಧ್ಯಕ್ಷ ಅರುಣ ದೊಡ್ಡಮನಿ, ಸದಸ್ಯರಾದ ವೆಂಕಟೇಶ ದೊಡಮನಿ, ಸತೀಶ ಆಕಳವಾಡಿ, ಆನಂದ ಬ. ದೊಡಮನಿ, ವಸಂತ ಆಕಳವಾಡಿ, ನಾಗರಾಜ ಮುಗದ, ಶರತ್ ದೊಡಮನಿ, ಆನಂದ ಕೃ.ದೊಡಮನಿ ಹಾಗೂ ವಿವೇಕ ಘಂಟೆಣ್ಣವರ, ಸಮಾಜದ ಹಿರಿಯರು, ವಾಸವಿ ಯುವಜನ ಸಂಘದ ಸದಸ್ಯರು, ಇತರರು ಇದ್ದರು.