ಹಾರೋಹಳ್ಳಿ : ಎಂಟನೇ ವರ್ಷದ ಹಾರೋಹಳ್ಳಿ ದಸರಾ ಮಹೋತ್ಸವ ಅ.3 ರಿಂದ 11ರವರೆಗೆ 9 ದಿನಗಳ ಕಾಲ ನವದುರ್ಗಿ ಮಾತೆಯರ ಪ್ರತಿಷ್ಠಾಪನೆ ಮತ್ತು ಆರಾಧನೆ ಬಳಿಕ ಅ.12ರಂದು ಪಟ್ಟಣದಲ್ಲಿ ಅದ್ದೂರಿಯಾಗಿ ದಸರಾ ಮಹೋತ್ಸವ ನಡೆಯಲಿದೆ ಎಂದು ಚಾಮುಂಡೇಶ್ವರಿ ಅಮ್ಮನವರ ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಗೌತಮ್ ಮರಿಲಿಂಗೇಗೌಡ ತಿಳಿಸಿದರು.
ಪಟ್ಟಣದ ಶ್ರೀ ಅರುಣಾಚಲೇಶ್ವರಸ್ವಾಮಿ ದೇವಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಸರಾ ಮಹೋತ್ಸವದ ಉದ್ಘಾಟನೆಯನ್ನು ಡಾ.ಶ್ರೀ ಆನಂದ್ ಗುರೂಜಿ ನೆರವೇರಿಸಲಿಸಲಿದ್ದಾರೆ. ಶನಿವಾರ ಸಂಜೆ 4.30ಕ್ಕೆ ಶ್ರೀ ಅರುಣಾಚಲೇಶ್ವರಸ್ವಾಮಿ ದೇವಾಲಯ ಮುಂಭಾಗದಿಂದ ಕಾರ್ಯಕ್ರಮ ಪ್ರಾರಂಭವಾಗಲಿದೆ. ಅದೇದಿನ ರಾತ್ರಿ 8.30ಕ್ಕೆ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ಬನ್ನಿಪೂಜೆ ಹಾಗೂ ರಾತ್ರಿ 9.30ರ ನಂತರ ಬಸ್ ನಿಲ್ದಾಣ ಸಮೀಪದ ಸರ್ಕಾರಿ ಶಾಲಾ ಮೈದಾನದಲ್ಲಿ ಅಮೋಘ ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಉತ್ಸವ ಸಮಿತಿ ಸಂಚಾಲಕ ಎಂ.ಮಲ್ಲಪ್ಪ ಮಾತನಾಡಿ, 8 ವರ್ಷಗಳಿಂದ ನಾಡಹಬ್ಬ ದಸರಾ ಮಹೋತ್ಸವ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ವಿಶೇಷವಾಗಿ ಧಾರ್ಮಿಕ ವಿಧಿವಿಧಾನಗಳಿಂದ ವೈಭವಯುತ ಆಚರಣೆ ನಡೆಸಲು ಸಮಿತಿ ತೀರ್ಮಾನಿಸಿದೆ ಎಂದರು.
ಶನಿವಾರ ಅದ್ದೂರಿ ದಸರಾ ಉತ್ಸವ ಮೆರವಣಿಗೆಯಲ್ಲಿ ಸರ್ವಾಲಂಕೃತ ಬೆಳ್ಳಿರಥದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪಿಸಿ, ಹಾರೋಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಗುವುದು. ಹೂವಿನ ಪಲ್ಲಕ್ಕಿ, ಮಂಗಳವಾದ್ಯ, ಚಿಲಿಪಿಲಿ ಬೊಂಬೆ, ಕರಗ ನೃತ್ಯ, ಡೊಳ್ಳು, ನೃತ್ಯ, ವೀರಗಾಸೆ, ಪೂಜಾ-ಪಟ ಕುಣಿತ, ಮೈಸೂರು ನಗಾರಿ ಇತ್ಯಾದಿ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಲಿದೆ. ಸಾರ್ವಜನಿಕರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ: 6ರಂದು ಬೆಳಗ್ಗೆಯಿಂದ ಮಹಿಳೆಯರು, ಮಕ್ಕಳು ಹಾಗೂ ಪುರುಷರ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.
ಮಹಿಳೆಯರಿಂದ ವಿಶೇಷ ಪೂಜೆ: ಈ ಬಾರಿ ದುರ್ಗಾಷ್ಠಮಿಯ ದಿನ ಪ್ರಸನ್ನ ಪಾರ್ವತಿ ಅಮ್ಮನವರ ಸನ್ನಿಧಿಯಲ್ಲಿ ನವದುರ್ಗಾ ಮಾತೆಯರ ಪ್ರತಿಷ್ಠಾಪನೆ,ಕುಂಕುಮಾರ್ಚನೆ ನೆರವೇರಿಸಲಿದ್ದಾರೆ.
ದಸರಾ ಸಮಿತಿ ಸಹ ಸಂಚಾಲಕ ಎಚ್.ಎಸ್.ಮುರಳೀಧರ್, ಪ್ರಧಾನ ಕಾರ್ಯದರ್ಶಿ ಹೋಟೆಲ್ ಜಗದೀಶ್, ಚಕ್ರಪಾಣಿ, ಸಾಂಸ್ಕೃತಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಯಾಕೂಬ್‌ಪಾಷಾ, ಸಹ ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ಶ್ರೀಕಂಠಯ್ಯ, ಬನ್ನಿಪೂಜೆ ಸಮಿತಿಯ ವಿಶ್ವನಾಥ್‌ರಾಜ್, ಅರ್ಚಕರಾದ ದಿವಾಕರ್‌ಭಟ್, ಮನೋಹರ್, ಕೃಷ್ಣಪ್ಪ, ಭೀಮಯ್ಯ, ರಮೇಶ್, ಅನಂತು, ಎಲ್.ಸುರೇಶ್, ಹೋಟೆಲ್ ಶಿವಲಿಂಗಯ್ಯ, ಎಚ್.ವಿ.ಸುರೇಶ್, ಮುನಿರಾಜು, ವೇಣು, ಮುತ್ತೇಗೌಡ, ಪದ್ಮಮ್ಮ, ಗಾಯತ್ರಿ, ನಾಗರತ್ನಾ ಉಪಸ್ಥಿತರಿದ್ದರು.