ಹೂವಿನಹಡಗಲಿ: ತಾಲೂಕಿಗೆ ಹೊಂದಿಕೊಂಡು ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಹಾಡಹಗಲೇ ತೆಪ್ಪಗಳ ಮೂಲಕ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನದಿ ತೀರದ ಗ್ರಾಮಗಳಾದ ಹರವಿ, ಮೈಲಾರ, ಕುರುವತ್ತಿ, ಹಿರೇಬನ್ನಿಮಟ್ಟಿ, ಬ್ಯಾಲಹುಣ್ಸಿ, ಕೋಟಿಹಾಳ, ಮಕರಬ್ಬಿ, ಅಂಗೂರು, ಹೊಸಹಳ್ಳಿ ಸೇರಿ ಇತರ ಪ್ರದೇಶಗಳಲ್ಲಿ ನದಿ ನೀರು ಕಡಿಮೆಯಾದ ದಿನಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಾರೆ. ಆದರೆ ಈಗ ನದಿ ತುಂಬಿ ಹರಿಯುತ್ತಿದ್ದರೂ ಹಗಲು ಮತ್ತು ರಾತ್ರಿ ಹೊತ್ತಿನಲ್ಲಿ ತೆಪ್ಪಗಳ ಮೂಲಕ ತೆರಳಿ ಕೆಲವರು ನೀರಿನ ಆಳಕ್ಕೆ ಇಳಿದು ಬಕೆಟ್‌ಗಳ ಮರಳು ತೆಗೆದು ಸಾಗಿಸುತ್ತಿದ್ದಾರೆ. ತೆಪ್ಪಗಳಲ್ಲಿ ತುಂಬಿಕೊಂಡು ದಡಕ್ಕೆ ಸಾಗಿಸಿ ಅಲ್ಲಿಂದ ಲಾರಿಗಳ ಮೂಲಕ ಬೇರೆ ಕಡೆ ರವಾನಿಸಲಾಗುತ್ತದೆ.
ಬ್ಯಾಲಹುಣ್ಸಿ ಗ್ರಾಮದಲ್ಲಿ ಕಳೆದೊಂದು ತಿಂಗಳಿನಿಂದ ನದಿ ತೀರದ ಗ್ರಾಮಗಳು ಹಾಗೂ ಅನ್ಯ ಜಿಲ್ಲೆಗಳ ಮರಳು ದಂಧೆಕೋರರು ನಿರಂತರವಾಗಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರೂ ಅಧಿಕಾರಿಗಳು ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ. ಇನ್ನು ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಅನೇಕ ವರ್ಷಗಳಿಂದ ಒಂದೇ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ತಡೆಯುತ್ತಿಲ್ಲವೇಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಎಸಿ, ಹರಪನಹಳ್ಳಿಚಿದಾನಂದ ಗುರುಸ್ವಾಮಿಕೂಡಲೇ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿ ನದಿ ತೀರದ ಪ್ರದೇಶದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗುವುದು. ಎಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತದೆಯೋ ಆ ಭಾಗದಲ್ಲಿ ನಮ್ಮ ಇಲಾಖೆ ಸಿಬ್ಬಂದಿಯನ್ನು ನೇಮಿಸಲಾಗುವುದು.