ಹುಬ್ಬಳ್ಳಿ: ಉಲ್ಲಾಸ್ ಎ.ಆರ್. ಹಾಗೂ ದೇವರಾಜ್ ಕೋಟಿ ಅವರ ಭರ್ಜರಿ ಜತೆಯಾಟದ ನೆರವಿನಿಂದ ಇಲ್ಲಿಯ ಶ್ರೀದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ತಂಡವು ಕೆಎಸ್ಸಿಎ 4ನೇ ಡಿವಿಜನ್ ಫೈನಲ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಜಯ ಗಳಿಸುವ ಮೂಲಕ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು.
ಟಿಳಕವಾಡಿ ಕ್ರಿಕೆಟ್ ಕೋಚಿಂಗ್ ಅಕಾಡೆಮಿ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ 3ನೇ ಡಿವಿಜನ್ ಟೂರ್ನಿಗೆ ಅರ್ಹವಾಗಿದೆ.
ಇಲ್ಲಿನ ಕೆಎಸ್ಸಿಎ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ನಿಗದಿತ ಓವರ್ ಟೂರ್ನಮೆಂಟ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟಿಳಕವಾಡಿ ಕ್ರಿಕೆಟ್ ಕೋಚಿಂಗ್ ಅಕಾಡೆಮಿ ತಂಡ 26.2 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 127 ರನ್ ಪೇರಿಸಿತು.
ಸಾಧಾರಣ ಮೊತ್ತ ಬೆನ್ನತ್ತಿದ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ತಂಡದ ಪರ ಉಲ್ಲಾಸ್ ಎ.ಆರ್. 31 ಎಸೆತಗಳಲ್ಲಿ 3 ಬೌಂಡರಿಗಳ ಸಹಾಯದಿಂದ 32 ರನ್ ಹಾಗೂ ದೇವರಾಜ್ ಕೋಟಿ 34 ಎಸೆತಗಳಲ್ಲಿ 3 ಬೌಂಡರಿಗಳ ಮೂಲಕ 25 ರನ್ ಗಳನ್ನು ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡ್ಯೊಯ್ದರು.
ಬೌಲಿಂಗ್ ನಲ್ಲಿ ಅಭಿಷೇಕ ಹೊನ್ನಾವರ, ರಾಜಾರಾಮ ವೈದ್ಯ, ಪವನ ಜಾಲಗಾರ, ದೇವರಾಜ ಕೋಟಿ ಮತ್ತು ಸಿದ್ದರಾಮಯ್ಯ ಉತ್ತಮ ಪ್ರದರ್ಶನ ನೀಡಿದರು.
ಸಂಜಯ ಕುಲಕರ್ಣಿ ಹಾಗೂ ಮಂಜುನಾಥ ಕಾಳೆ ಅಂಪೈರಿಂಗ್ ನೇತೃತ್ವ ವಹಿಸಿದ್ದರು. ಮಂಜುನಾಥ ಕೆ. ಸ್ಕೋರ್ ವಿವರಣೆ ನೀಡಿದರು.
ಅಕಾಡೆಮಿಯಲ್ಲಿರುವ ಉತ್ತಮ ಸೌಲಭ್ಯಗಳು ಕಲಿಕಾರ್ತಿಗಳಿಗೆ ಉತ್ತೇಜನ ನೀಡುತ್ತವೆ. ಇದರಿಂದ ಸಾಧನೆ ಮಾಡಲು ಅನುಕೂಲವಾಗಿದೆ ಎಂದು ಕೋಚ್ ಗಳಾದ ದಯಾನಂದ ಶೆಟ್ಟಿ ಹಾಗೂ ಪ್ರಮೋದ ಕಾಮತ್ ಅವರು ಅಭಿಪ್ರಾಯಪಟ್ಟರು.
ಶ್ರೀದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ತಂಡ ಟೂರ್ನಾಮೆಂಟ್ನಲ್ಲಿ 5 ವಿಕೆಟ್‌ಗಳ ಜಯ ಗಳಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಆಟಗಾರರು, ಕೋಚ್ ಗಳ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಸತತ ನಾಲ್ಕು ವರ್ಷಗಳಿಂದ ಕ್ರಿಕೆಟ್ ನಲ್ಲೇ ಭವಿಷ್ಯ ಕಂಡುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಅಭ್ಯಾಸ ಮಾಡುತ್ತಿರುವ ಅಂಡರ್ 12, 14 ಹಾಗೂ 16 ವಯಸ್ಸಿನ ವಿದ್ಯಾರ್ಥಿಗಳಿಗೆ ಈ ಗೆಲವು ಸ್ಪೂರ್ತಿ ತುಂಬಿದೆ ಎಂದು ಶ್ರೀದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕ ವಿರೇಶ ಉಂಡಿ ತಿಳಿಸಿದ್ದಾರೆ.