ಕೆರೂರ: ಸ್ಥಳೀಯ ಹರಣಶಿಕಾರಿ ಜನಾಂಗದ ದುರ್ಗಾದೇವಿ ಜಾತ್ರೆ ಶುಕ್ರವಾರ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಧಾರ್ಮಿಕ ಕಾರ್ಯಗಳು ನಡೆದವು. ನಂತರ ಪಲ್ಲಕ್ಕಿಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ ನಡೆಯಿತು.
ದೇವಸ್ಥಾನದಲ್ಲಿ ಸಂಜೆ 11 ತೆಂಗಿನ ಕಾಯಿಗಳನ್ನು ತಲೆಗೆ ಹೊಡೆದುಕೊಂಡು ‘ಈ ಬಾರಿ ಉತ್ತಮ ಮಳೆ, ಬೆಳೆ ಆಗಲಿದೆ’ ಎಂದು ಅರ್ಚಕ ಬಾಬು ಪೂಜಾರಿ ದೈವವಾಣಿ ನುಡಿದರು. ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ಆಶೀರ್ವಾದ ಪಡೆದುಕೊಂಡರು.
ಜಾತ್ರೆ ಅಂಗವಾಗಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಂಡರು. ಜಿಪಂ ಮಾಜಿ ಸದಸ್ಯ ಡಾ. ಎಂ.ಜಿ. ಕಿತ್ತಲಿ, ಡಾ. ಬಿ.ಕೆ. ಕೊವಳ್ಳಿ, ಪಪಂ ಅಧ್ಯಕ್ಷೆ ನಿರ್ಮಲಾ ಮದಿ, ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಪಪಂ ಸದಸ್ಯ ವಿಠ್ಠಲಗೌಡ ಗೌಡರ, ಬಸವರಾಜ ಹರಣಶಿಕಾರಿ, ಬಾಬು ಹರಣಶಿಕಾರಿ, ಅಪ್ಪಣ್ಣ ಹರಣಶಿಕಾರಿ, ಮಲ್ಲಪ್ಪ ಹರಣಶಿಕಾರಿ, ಶಾರವ್ವ ಹರಣಶಿಕಾರಿ, ಶೇಖವ್ವ ಹರಣಶಿಕಾರಿ, ದೇವರಾಜ ಚೂರಿ ಮತ್ತಿತರರಿದ್ದರು.