ರಾಯಚೂರು: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟ್‌ಗಳಿಂದ ಹಣ ಲಪಟಾಯಿಸುವ ದುಷ್ಕರ್ಮಿಗಳು ಈಗ ಕೇಂದ್ರ ಗುಪ್ತಚರ ಇಲಾಖೆ, ಸಿಬಿಐ ಹೆಸರಿನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ ವಿಡಿಯೋ ವೀಕ್ಷಣೆ ಮತ್ತು ಪಾರ್ವಡ್ ಮಾಡಿದ್ದೀರಿ ಎನ್ನುವ ನಕಲಿ ನೋಟಿಸ್ ಕಳುಹಿಸಿ ವಂಚನೆಗೆ ಮುಂದಾಗಿದ್ದಾರೆ.
ವಂಚಕರು ಐಬಿ, ಸಿಬಿಐ ಮತ್ತು ಕೇಂದ್ರ ಸೈಬರ್ ಸೆಲ್ ಹೆಸರಿನಲ್ಲಿ ಜನರಿಗೆ ಮಕ್ಕಳ ಲೈಂಗಿಕ ದೌರ್ಜನ್ಯ ವಿಡಿಯೋ ವೀಕ್ಷಣೆ ಮತ್ತು ಪಾರ್ವಡ್ ಮಾಡುವ ಅಪರಾಧ ಮಾಡಿದ್ದೀರಿ, 24 ಗಂಟೆಯೊಳಗೆ ನಮ್ಮನ್ನು ಸಂಪರ್ಕಿಸಿ, ಇಲ್ಲದಿದ್ದರೆ ಸ್ಥಳೀಯ ಪೊಲೀಸ್ ಠಾಣೆ ಮೂಲಕ ಅರೆಸ್ಟ್ ವಾರೆಂಟ್ ಆದೇಶ ಹೊರಡಿಸಲಾಗುವುದು ಎಂದು ಬೆದರಿಕೆ ಹಾಕುವ ನೋಟಿಸ್‌ನ್ನು ಜನರ ವಾಟ್ಸಪ್ ಖಾತೆಗೆ ಹಾಕಲಾಗುತ್ತಿದೆ.
ಆದೇಶ ಪತ್ರಕ್ಕೆ ಸಹಿ ಮತ್ತು ಸೀಲ್ ಹಾಕಲಾಗಿರುತ್ತದೆ. ನಂತರ ಹಿಂದಿಯಲ್ಲಿ ಮಾತನಾಡುವ ವಂಚಕರು ತಾವು ಪೊಲೀಸ್ ಅಕಾರಿ ಎಂದು ಕರೆ ಮಾಡಿ, ನಿಮ್ಮ ವಿರುದ್ಧ ಆರೋಪವಿದ್ದು ಅವರು ಹೇಳಿದ ಖಾತೆಗೆ ಹಣ ಹಾಕದಿದ್ದಲ್ಲಿ ಅರೆಸ್ಟ್ ವಾರೆಂಟ್ ಹೊರಡಿಸಲಾಗುವುದು ಎಂದು ಬೆದರಿಸುತ್ತಿರುವ ಪ್ರಕರಣ ಕಂಡು ಬರುತ್ತಿದೆ.
ಇದುವರೆಗೂ ಬೇರೆಯವರ ಹೆಸರಿನಲ್ಲಿ ಹಣ ಕೇಳಿ ವಂಚಿಸಿರುವ ಪ್ರಕರಣಗಳು ಕಂಡು ಬರುತ್ತಿದ್ದವು. ಈಗ ವಂಚಕರು ಪೊಲೀಸರ ಸೋಗಿನಲ್ಲಿ ಜನರಿಗೆ ವಂಚಿಸಲು ಮುಂದಾಗಿದ್ದಾರೆ. ಹೀಗಾಗಿ ಸ್ಥಳೀಯ ಸೈಬರ್ ಕ್ರೈಮ್ ವಿಭಾಗ ಇಂತಹ ಸಂದೇಶ ಮತ್ತು ಬೆದರಿಕೆಗೆ ಹಣ ಪಾವತಿಸಬಾರದು ಎನ್ನುವ ಎಚ್ಚರಿಕೆಯನ್ನು ಸಾರ್ವಜನಿಕರಿಗೆ ಹೊರಡಿಸಿದೆ.
ಪ್ರಸ್ತುತ ಜಿಲ್ಲೆಯ ಸೈಬರ್ ಕ್ರೈಮ್ ವಿಭಾಗದಲ್ಲಿ ಈ ಕುರಿತಂತೆ ಯಾವುದೇ ಪ್ರಕರಣ ದಾಖಲಾಗದಿದ್ದರೂ ಇಂತಹ ನಕಲಿ ನೋಟಿಸ್‌ಗಳು ಬಹಳಷ್ಟು ಜನರಿಗೆ ಬರುತ್ತಿರುವುದರಿಂದ ಎಚ್ಚರಿಕೆಯಿಂದ ಇರುವಂತೆ ಮುನ್ನೆಚ್ಚರಿಕೆಯನ್ನು ಇಲಾಖೆಯಿಂದ ನೀಡಲಾಗಿದೆ.