ಜಿಲ್ಲೆ

ಏಷಿಯನ್​ ಪೇಂಟ್ಸ್​​ ನಕಲು ಮಾಡಿ ಮಾರಾಟ; ಆರೋಪಿ ಬಂಧನ

Webdesk - Manjunatha B

ಬೆಂಗಳೂರು: ನಕಲಿ ಏಷಿಯನ್ ಪೇಂಟ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಿವಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಚುನ್ನಿಲಾಲ್ ಬಂಧಿತ ಆರೋಪಿ. 20 ಲಕ್ಷ ರೂ. ಮೌಲ್ಯದ ನಕಲಿ ಏಷಿಯನ್ ಪೇಂಟ್ ಜಪ್ತಿ ಮಾಡಿದ್ದಾರೆ.

ತನ್ನದೇ ಶೋ ರೂಮ್​ ಹೊಂದಿದ್ದ

ಆರೋಪಿಯು ಕಳೆದ 10 ವರ್ಷಗಳಿಂದ ಪ್ರತಿಷ್ಠಿತ ಏಷಿಯನ್ ಪೇಂಟ್ಸ್ ಹೆಸರಿನಲ್ಲಿ ನಕಲಿ ಪೈಂಟ್‌ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ. ಆರೋಪಿಯೂ ತನ್ನದೇ ಆದಂತಹ ಪೇಂಟ್ ಶೋ ರೂಮ್ ಒಂದನ್ನು ಹೊಂದಿದ್ದ. ಹೀಗಾಗಿ ಪೈಂಟ್ ಬಗ್ಗೆ ಬಹುತೇಕ ಎಲ್ಲ ವಿಚಾರಗಳನ್ನೂ ಅರಿತಿದ್ದ.

ಕಳೆದ 10 ವರ್ಷದಲ್ಲಿ ಕೋಟ್ಯಾಂತರ ರೂ. ಬೆಲೆ ಬಾಳುವ ಏಷಿಯನ್ ಪೇಂಟ್ ಮಾರಾಟ ಮಾಡಿದ್ದ. ಏಷಿಯನ್ ಪೇಂಟ್ ಸ್ಟಿಕ್ಕರ್ ಸೇರಿ, ಪೇಂಟ್ ಪ್ರೊಡೆಕ್ಷನ್‌ನನ್ನು ಸಹ ನಕಲು ಮಾಡುತ್ತಿದ್ದ. ಏಷಿಯನ್ ಪೇಂಟ್ಸ್ ಡಿಸ್ಟ್ರಿಬ್ಯೂಟರ್‌ಗಳಿಗೆ ಇತ್ತೀಚೆಗೆ ಆರೋಪಿಯ ಕಳ್ಳಾಟದ ಸುಳಿವು ಸಿಕ್ಕಿತ್ತು. ಅವರು ಈ ಬಗ್ಗೆ ವಿವಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಗ್ರಾಹಕರ ಸೋಗಿನಲ್ಲಿ ಬಂಧನ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗ್ರಾಹಕರ ಸೋಗಿನಲ್ಲಿ ಹೋಗಿ ಸ್ಯಾಂಪಲ್‌ಗಾಗಿ ಒಂದು ಬಾಕ್ಸ್ ಪೇಂಟ್‌ನ್ನು ಖರೀದಿ ಮಾಡಿ ಪರೀಕ್ಷೆ ಮಾಡಿಸಿದ್ದರು. ಪರೀಕ್ಷೆಯಲ್ಲಿ ನಕಲಿ ಪೇಂಟ್ ಎಂಬುದು ಪತ್ತೆಯಾಗಿತ್ತು. ಕೂಡಲೇ ಚುನ್ನಿಲಾಲ್‌ನನ್ನು ಬಂಧಿಸಿರುವುದಾಗಿ ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ನಡೆಸಿ ಪೇಂಟ್ ಜಪ್ತಿ

ಬಂಧಿತ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಗೋದಾಮಿನಲ್ಲಿ ಏಷಿಯನ್ ಪೇಂಟ್ ಸಂಗ್ರಹಿಸಿಟ್ಟಿರುವ ಮಾಹಿತಿ ಸಿಕ್ಕಿತ್ತು. ಕೂಡಲೇ ನಕಲಿ ಪೇಂಟ್ ತಯಾರಿಸುವ ಹೆಸರುಘಟ್ಟ ಮುಖ್ಯ ರಸ್ತೆಯ ಕಾರ್ಖಾನೆ ಹಾಗೂ ಶಿವಕೋಟೆ ಗ್ರಾಮದಲ್ಲಿರುವ ಗೋದಾಮಿನ ಮೇಲೆ ದಾಳಿ ಮಾಡಿ 20 ಲಕ್ಷ ರೂ. ಮೌಲ್ಯದ ಏಷಿಯನ್ ಪೇಂಟ್ಸ್ ಬ್ರಾಂಡಿನ ಅಪೇಕ್ಸ್, ಏಸ್, ರಾಯಲ್, ಟ್ರಾಕ್ಟರ್, ಪ್ರೀಮಿಯಮ್ ಸೇರಿ ವಿವಿಧ ಬಗೆಯ ಪೇಂಟ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ.