ಹೆಬ್ರಿ: ಹೆಬ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಡುಪಿ ಮತ್ತು ಕಾರ್ಕಳ ರಸ್ತೆ ಸಂಪರ್ಕಿಸುವ ರಿಂಗ್‌ರೋಡ್ ಮತ್ತು ಗಿಲ್ಲಾಳಿ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ರಾಶಿ ಮತ್ತು ಕೋಳಿ ತ್ಯಾಜ್ಯಗಳಿಂದ ಪರಿಸರವಿಡೀ ದುರ್ನಾತ ಬೀರುತ್ತಿದೆ. ಒಂದೆಡೆ ಕಟ್ಟಡ ತ್ಯಾಜ್ಯಗಳು ಮತ್ತೊಂದೆಡೆ ಹೋಟೆಲ್ ತ್ಯಾಜ್ಯಗಳನ್ನು ತಂದು ಸುರಿಯುವುದರಿಂದ ಈ ಭಾಗದಲ್ಲಿ ಗಬ್ಬು ವಾಸನೆಯೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯ ಅಲ್ಲಲ್ಲಿ ಹರಡಿ ಪರಿಸರಕ್ಕೆ ಹಾನಿಯಾಗುತ್ತಿದೆ.
ಸ್ವಚ್ಛ ಭಾರತದ ಕಲ್ಪನೆಯನ್ನು ಇಟ್ಟುಕೊಂಡು ಹೆಬ್ರಿ ಭಾಗದಲ್ಲಿ ಲಯನ್ಸ್ ಕ್ಲಬ್ ಹೆಬ್ರಿ, ಶಾಂತಿನಿಕೇತನ ಯುವವೃಂದ ಕುಡಿಬೈಲು, ಕುಚ್ಚೂರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹೆಬ್ರಾಯ್ ನಂತಹ ಸಂಸ್ಥೆಗಳು ಕಸ ಮುಕ್ತ ಹೆಬ್ರಿ ಮಾಡಲು ಪಣ ತೊಟ್ಟಿದ್ದಾರೆ. ಆದರೆ ಕೆಲವರಿಂದ ಸ್ವಚ್ಛ ಪರಿಸರಕ್ಕೆ ಅಡ್ಡಿಯಾಗುತ್ತಿದೆ.
ಅಂಗಡಿ-ಮುಂಗಟ್ಟು, ಹೋಟೆಲ್‌ಗಳಿಂದ ಸಂಗ್ರಹವಾದ ತ್ಯಾಜ್ಯ, ಖಾಲಿ ಮದ್ಯ ಬಾಟಲಿಗಳನ್ನು ರಸ್ತೆ ಬದಿಗಳಲ್ಲೇ ಸುರಿಯಲಾಗುತ್ತದೆ. ಪ್ರತಿನಿತ್ಯ ದನ- ಕರು ಮತ್ತು ನಾಯಿಗಳು ಆಹಾರ ಪೊಟ್ಟಣಗಳನ್ನು ತಿಂದು ರಸ್ತೆಯಲ್ಲಿ ಬಿಟ್ಟು ಹೋಗಿ ಪರಿಸರವಿಡೀ ಗಲೀಜಾಗುತ್ತಿದೆ. ಇದೇ ಮಾರ್ಗದಲ್ಲಿ ಸಂಚರಿಸುವ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಹೋಗಬೇಕಾಗಿರುವುದು ಅನಿವಾರ್ಯವಾಗಿದೆ. ಹೆಬ್ರಿ ಪಂಚಾಯಿತಿಗೆ ಅರ್ಧ ಕಿ.ಮೀ. ಅಂತರದಲ್ಲಿ ಈ ರೀತಿ ತ್ಯಾಜ್ಯ ರಾಶಿ ಬೀಳುತ್ತಿದ್ದರೂ ಆಡಳಿತದ ಗಮನಕ್ಕೆ ಬರದಿರುವುದು ವಿಪರ್ಯಾಸ. ಗಿಲ್ಲಾಳಿಯಲ್ಲಿ ಸೂಚನಾ ಫಲಕ ಆಳವಡಿಸಿದರೂ ಅದನ್ನು ನಿರ್ಲಕ್ಷಿಸಿ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ.
ಕಠಿಣ ಕ್ರಮಕ್ಕೆ ಆಗ್ರಹ: ಬೀದಿ ವ್ಯಾಪಾರಿಗಳು ನಮ್ಮ ಕಸಕ್ಕೆ ನಾವೇ ಹೊಣೆ, ನಮ್ಮಲ್ಲಿ ಸಂಗ್ರಹವಾಗುವ ಕಸವನ್ನು ಪಂಚಾಯಿತಿ ಕಸ ಸಂಗ್ರಹ ವಾಹನಕ್ಕೆ ನೀಡುತ್ತೇವೆ. ಒಂದು ವೇಳೆ ತಪ್ಪಿದಲ್ಲಿ ದಂಡಿಸಿ ಎನ್ನುವ ಉಲ್ಲೇಖದೊಂದಿಗೆ ಪಂಚಾಯಿತಿಗೆ ಪತ್ರ ಬರೆಯಲಿ. ಎಲ್ಲೆಂದರಲ್ಲಿ ಬೀದಿ ವ್ಯಾಪಾರಿಗಳು ಹೆಚ್ಚು ಕಸ ಹಾಕುವುದರಿಂದ ಅವರಲ್ಲಿ ಅರಿವು ಮೂಡಿಸಲು ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಿ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಿಂಗ್‌ರೋಡ್ ಮತ್ತು ಗಿಲ್ಲಾಳಿ ರಸ್ತೆ ಪರಿಸರದಲ್ಲಿ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಕೆಲವರು ತ್ಯಾಜ್ಯ ಎಸೆಯುತ್ತಿದ್ದಾರೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಸಂದರ್ಭ ಎದುರಾಗಿದೆ. ಆದ್ದರಿಂದ ದಯವಿಟ್ಟು ಸಂಬಂಧಪಟ್ಟ ಇಲಾಖಾಧಿಕಾರಿಗಳು ಇದರ ಬಗ್ಗೆ ಗಮನಹರಿಸಿ, ತ್ಯಾಜ್ಯ ಬಿಸಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.
ಶ್ರೀಕಾಂತ್ ಕುಚ್ಚೂರು, ಆಟೋ ಚಾಲಕ
ಈಗಾಗಲೇ ಹೆಬ್ರಿ ಸುತ್ತಮುತ್ತ ಹಲವಾರು ಸಂಘ ಸಂಸ್ಥೆಗಳು ಕೂಡಿ ಸ್ವಚ್ಛ ಮಾಡುವುದರೊಂದಿಗೆ ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ‌್ಯವನ್ನು ನಾವೆಲ್ಲ ಮಾಡಿದ್ದೇವೆ. ಆದರೂ ಜನತೆ ಎಚ್ಚೆತ್ತುಕೊಳ್ಳದೆ ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವುದು ವಿಷಾದನೀಯ. ಇದು ದನ-ಕರು ಮತ್ತು ನಾಯಿಗಳಿಗೆ ಮಾರಕವಾಗಿದೆ.
ಡಾ.ಭಾರ್ಗವಿ ಆರ್. ಐತಾಳ್, ಹೆಬ್ರಿ ಲಯನ್ಸ್ ಕ್ಲಬ್ ಅಧ್ಯಕ್ಷೆ
ತ್ಯಾಜ್ಯ ಸಮಸ್ಯೆಬಗ್ಗೆ ಸಮರ್ಪಕ ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು. ಕಸ ಮತ್ತು ತ್ಯಾಜ್ಯ ಹಾಕುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇವೆ. ಇದಕ್ಕಾಗಿ ಓರ್ವ ಸಿಬ್ಬಂದಿಯನ್ನು ಈ ಸ್ಥಳದಲ್ಲಿ ನಿಯೋಜಿಸಲಾಗುವುದು. ಮುಂದಿನ ದಿನಗಳಲ್ಲಿ ಈ ರೀತಿ ನಿಯಮ ಉಲ್ಲಂಘನೆಗೆ ಅನುವು ಮಾಡಿಕೊಡುವುದಿಲ್ಲ.
ಸದಾಶಿವ ಸೇರ್ವೆಗಾರ್, ಹೆಬ್ರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ