ಅನ್ಸರ್ ಇನ್ನೋಳಿ ಉಳ್ಳಾಲ
ನಗರದಲ್ಲಿದ್ದರೂ ಹಳ್ಳಿ ಸೊಗಡಿನ ತಂಪಿನಿಂದಾವೃತ್ತ ಪರಿಸರ. ಆದರೆ ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ತ್ಯಾಜ್ಯ ರಾಶಿ ಬಿದ್ದು ದುರ್ವಾಸನೆಯಿಂದಾಗಿ ಸನಿಹಕ್ಕೆ ಹೋಗಲೂ ಅಸಹ್ಯಪಡುತ್ತಿರುವ ಜನ. ಸ್ಥಳೀಯರಲ್ಲಿ ಸಾಂಕ್ರಾಮಿಕ ಕಾಯಿಲೆ ಭೀತಿ. ಆದರೂ ಕೈಕಟ್ಟಿ ಕುಳಿತಿದೆ ಸ್ಥಳೀಯಾಡಳಿತ. ಇದು ಉಳ್ಳಾಲ ನಗರಸಭಾ ವ್ಯಾಪ್ತಿಯ ದುರ್ನಾತದ ಕಥೆ.
ಉಳ್ಳಾಲ ತಾಲೂಕು, ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಏಕೈಕ ನಗರಸಭೆ ಉಳ್ಳಾಲ ಎನ್ನುವ ಕೀರ್ತಿ ಹೊಂದಿದೆ. ಆದರೆ ನಗರಸಭಾ ವ್ಯಾಪ್ತಿಯಲ್ಲಿರುವ ಬಬ್ಬುಕಟ್ಟೆ- ರಾಣಿಪುರ ಸಂಪರ್ಕ ರಸ್ತೆಯಲ್ಲಿ ಹಲವು ವರ್ಷಗಳಿಂದ ತ್ಯಾಜ್ಯ ರಾಶಿ ಬಿದ್ದಿದ್ದು ಅನಧಿಕೃತ ಡಂಪಿಂಗ್ ಯಾರ್ಡ್ ಆಗಿ ಪರಿಣಮಿಸಿದೆ.
ಬಬ್ಬುಕಟ್ಟೆಯಿಂದ ರಾಣಿಪುರ ಸಂಪರ್ಕ ರಸ್ತೆ ನಡುವೆ ಸಿಗುವ ಚಂದಪ್ಪ ಎಸ್ಟೇಟ್, ಸೇವಂತಿಗುಡ್ಡೆ, ತಾರಿಪಡ್ಪು, ಮುಡಿಮೋಡಿ ಪ್ರದೇಶದಲ್ಲಿ ರಾತ್ರಿ ಹೊತ್ತು ಮಾತ್ರವಲ್ಲದೆ ಹಗಲಲ್ಲೂ ಕಿಡಿಗೇಡಿಗಳು ಡಂಪಿಂಗ್ ಯಾರ್ಡ್ ಮಾದರಿಯಲ್ಲಿ ತ್ಯಾಜ್ಯ ತಂದು ಸುರಿದು ಹೋಗುತ್ತಿದ್ದಾರೆ. ಸತ್ತ ಪ್ರಾಣಿಗಳನ್ನೂ ಇಲ್ಲೇ ಎಸೆಯಲಾಗುತ್ತಿದೆ. ಕೋಳಿ, ಮಾಂಸದಂಗಡಿಗಳ ತ್ಯಾಜ್ಯ, ಮನೆ, ಹೋಟೆಲ್, ವಸತಿ ಗೃಹಗಳ ತ್ಯಾಜ್ಯವನ್ನು ವಾಹನಗಳಲ್ಲಿ ತಂದು ಇಲ್ಲಿ ಸುರಿಯಲಾಗುತ್ತಿದೆ. ಇವೆಲ್ಲವೂ ಕೊಳೆತು ದುರ್ನಾತ ಬೀರುತ್ತಿವೆ. ತ್ಯಾಜ್ಯದ ಮೇಲೆ ಹುಳಗಳು ಸಾಮ್ರಾಜ್ಯವನ್ನೇ ಸ್ಥಾಪಿಸಿದ್ದರೆ ಪರಿಸರದಲ್ಲಿ ಸೊಳ್ಳೆ ಕಾಟಕ್ಕೆ ಸ್ಥಳೀಯರು ತತ್ತರಿಸಿದ್ದಾರೆ.
ಭಯಾನಕ ರಸ್ತೆ!
ಈ ಪರಿಸರದಲ್ಲಿ ಸಾಕಷ್ಟು ಮನೆಗಳಿವೆ. ಎರಡು ಕಿ.ಮೀ. ಇರುವ ಬಬ್ಬುಕಟ್ಟೆಯಿಂದ ರಾಣಿಪುರ ಮುಖ್ಯ ರಸ್ತೆವರೆಗೆ ಡಾಂಬರು ರಸ್ತೆ ಇದ್ದು ಇಕ್ಕೆಲಗಳಲ್ಲಿ ಮರಗಳಿಂದ ಆವೃತ್ತವಾಗಿ ನೆರಳಿಂದ ಕೂಡಿ ನಗರಸಭಾ ವ್ಯಾಪ್ತಿಯಲ್ಲಿ ಅತ್ಯಂತ ತಂಪು ಪರಿಸರ ಎನಿಸಿದೆ. ಆದರೆ ಇಲ್ಲಿನ ತ್ಯಾಜ್ಯದ ದುರ್ನಾತದಿಂದಾಗಿ ಈ ರಸ್ತೆಯಲ್ಲಿ ಸಂಚರಿಸಲೂ ಸಾರ್ವಜನಿಕರು ಹೆದರುವುದರಿಂದ ನಿರ್ಜನ ಪರಿಸರ ಎನಿಸಿ ರಸ್ತೆಯನ್ನು ಕಾಣುವಾಗಲೇ ಭಯಾನಕವಾಗಿ ಗೋಚರಿಸುತ್ತದೆ. ಇರುವ ತ್ಯಾಜ್ಯವನ್ನು ಸಂಪೂರ್ಣ ತೆರವುಗೊಳಿಸಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಪರಿಸರವನ್ನು ತ್ಯಾಜ್ಯ, ಭಯ ಮುಕ್ತಗೊಳಿಸಬೇಕು ಎಂದು ಸ್ಥಳೀಯರು ಹಲವು ಬಾರಿ ನಗರಸಭೆಗೆ ಮಾಡಿದ ಮನವಿಗೆ ಸ್ಪಂದನೆ ಇಲ್ಲ ಎಂಬ ಆರೋಪ ಕೇಳಿಬಂದಿದೆ.
ತ್ಯಾಜ್ಯ ನಿರ್ವಹಣೆಗೆ ಪಚ್ಚನಾಡಿ ಆಶ್ರಯ!
ಉಳ್ಳಾಲ ತಾಲೂಕಿಗೆ ಉಳ್ಳಾಲ ನಗರಸಭೆ ಹೃದಯ ಇದ್ದಂತೆ. 1.20 ಲಕ್ಷ ಮತದಾರರನ್ನು ಹೊಂದಿರುವ ಉಳ್ಳಾಲ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಕಾರಣದಿಂದಾಗಿ ಸರ್ಕಾರದಿಂದ ಬಂದಿರುವ ಯೋಜನೆಗಳು ಅಷ್ಟಿಷ್ಟಲ್ಲ. ಆದರೂ ಘನತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಸ್ವಂತಿಕೆ ಇಲ್ಲ ಎನ್ನುವ ಬೇಸರವೂ ಇದೆ. ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ನಗರಸಭಾ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಜಾಗವೇ ಇಲ್ಲ ಎನ್ನುವ ಸಬೂಬು ಅಧಿಕಾರಿಗಳದ್ದು. ಇದರಿಂದಾಗಿ ಇಲ್ಲಿ ಸಂಗ್ರಹಿಸಲಾಗುವ ತ್ಯಾಜ್ಯ ನಿರ್ವಹಣೆಗೆ ಪಚ್ಚನಾಡಿಯೇ ಆಶ್ರಯ.
ಸೇವಂತಿಗುಡ್ಡೆ ತಾರಿಪಡುವಿನಲ್ಲಿ ರಸ್ತೆ ಬದಿಯಲ್ಲಿ ಹಾಕಿರುವ ಘನತಾಜ್ಯ ತೆರವುಗೊಳಿಸಿ ಸಿಸಿ ಕ್ಯಾಮರಾ ಅಳವಡಿಸುವಂತೆ ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವುದೇ ಅಪಾಯಕಾರಿ ಎನಿಸಿದೆ. ಇತ್ತೀಚೆಗೆ ಒಂದಷ್ಟು ತ್ಯಾಜ್ಯ ತೆರವುಗೊಳಿಸಲಾಗಿದ್ದು, ಇಲ್ಲಿಗೆ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವಿದೆ. ದಿನಕರ್ ಉಳ್ಳಾಲ್, ಸದಸ್ಯರು, ಉಳ್ಳಾಲ ನಗರಸಭೆ ನಗರಸಭೆಯಿಂದ ಸ್ವಚ್ಛಗೊಳಿಸಿದರೂ ಸಾರ್ವಜನಿಕರು ಮತ್ತೆ ತ್ಯಾಜ್ಯ ತಂದು ಹಾಕುವುದು ನಿಂತಿಲ್ಲ. ಹಿಂದೆ ಸಿಸಿ ಕ್ಯಾಮರಾ ಅಳವಡಿಸಿದರೂ ತ್ಯಾಜ್ಯ ಹಾಕುವುದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಜಮೀನಿಗೆ ಸಂಬಂಧಪಟ್ಟವರು ಪಹರೇದಾರರನ್ನಿಟ್ಟು ನಿಯಂತ್ರಿಸಲು ಪ್ರಯತ್ನಿಸಬೇಕು. ಮುಷ್ತಾಕ್ ಪಟ್ಲ, ಸ್ಥಳೀಯ ಸದಸ್ಯರು, ಉಳ್ಳಾಲ ನಗರಸಭೆ https://www.vijayavani.net/operator-dies-as-crane-overturns https://www.vijayavani.net/yaksha-sambrama-3