ಜಿಲ್ಲೆ

ತ್ಯಾಜ್ಯ ಸಂಪನ್ಮೂಲ ಕೇಂದ್ರ

Dakshina Kannada

ಮನೋಹರ ಬಳಂಜ ಬೆಳ್ತಂಗಡಿ

ಉತ್ತಮ ಆಡಳಿತ, ಪ್ರಾಮಾಣಿಕ ದುಡಿಮೆ ಜತೆಗೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಕೊಂಡರೆ ಕಸದಿಂದ ರಸ ತೆಗೆದು ಸಂಪನ್ಮೂಲ ಕ್ರೋಡೀಕರಣ ಸಾಧ್ಯ ಎಂದು ತೋರಿಸಿಕೊಡುವತ್ತ ಉಜಿರೆ ಗ್ರಾಮ ಪಂಚಾಯಿತಿ ಹೆಜ್ಜೆ ಇಟ್ಟಿದೆ.

18 ಸಾವಿರಕ್ಕಿಂತಲೂ ಅಧಿಕ ಜನಸಂಖ್ಯೆ, 4,500ದಷ್ಟು ಮನೆ, ಹೆಸರಾಂತ ಶೈಕ್ಷಣಿಕ ಸಂಸ್ಥೆಗಳು, ಅನೇಕ ವಾಣಿಜ್ಯ ಮಳಿಗೆ, ಅಂಗಡಿ- ಮುಂಗಟ್ಟು, ತರಕಾರಿ- ಹಣ್ಣಿನ ಅಂಗಡಿಗಳು, ಆಸ್ಪತ್ರೆ ಇತ್ಯಾದಿ ಎಲ್ಲವನ್ನೂ ಹೊಂದಿರುವ ಪ್ರಮುಖ ಪಟ್ಟಣ ಉಜಿರೆ. ಈ ಪ್ರದೇಶದಲ್ಲಿ ಕಂಡುಬರುವ, ಉತ್ಪತ್ತಿಯಾಗುವ ಕಸ, ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಜವಾಬ್ದಾರಿ ಪಂಚಾಯಿತಿಯದು. ಇದನ್ನು ಸವಾಲಾಗಿ ಸ್ವೀಕರಿಸಿರುವ ಉಜಿರೆ ಗ್ರಾಮ ಪಂಚಾಯಿತಿ ಹಲವಾರು ವ್ಯವಸ್ಥೆ ಮಾಡಿಕೊಂಡಿದ್ದು, ಇದರಿಂದ ಪಂಚಾಯಿತಿಯ ಆದಾಯದ ಮೂಲಕ್ಕೂ ಅಡಿಪಾಯ ನಿರ್ಮಿಸುತ್ತಿದೆ.

ಗ್ರಾಮದ ಇಚ್ಚಿಲ ಎಂಬಲ್ಲಿ ಸರ್ವೇ ನಂಬರ್ 172 ಹಾಗೂ 564ರಲ್ಲಿರುವ 1.60 ಎಕರೆ ಜಾಗವನ್ನು ಪಂಚಾಯಿತಿ ಹೊಂದಿದ್ದು, ಇಲ್ಲಿ ತ್ಯಾಜ್ಯ ಸಂಪನ್ಮೂಲ ಘಟಕ ಕಾರ್ಯನಿರ್ವಹಿಸುತ್ತಿದೆ. 30 ಸೆಂಟ್ಸ್ ಜಾಗದಲ್ಲಿ 4,000ಕ್ಕಿಂತ ಅಧಿಕ ಚದರ ಅಡಿಯ ಕಟ್ಟಡ ನಿರ್ಮಿಸಲಾಗಿದೆ. ಈ ಪ್ರದೇಶಕ್ಕೆ ವ್ಯವಸ್ಥಿತ ರಸ್ತೆಯೂ ನಿರ್ಮಾಣವಾಗಿದೆ. ಇಲ್ಲಿ ಬಾಟಲಿ, ಬಟ್ಟೆ, ಚಪ್ಪಲಿ, ಇಲೆಕ್ಟ್ರಾನಿಕ್, ಫ್ಯಾನ್ಸಿ ಮೊದಲಾದ ವಸ್ತುಗಳನ್ನು ತ್ಯಾಜ್ಯದಿಂದ ಪ್ರತ್ಯೇಕಿಸಿ ಇಡಲು ಬೇರೆ ಬೇರೆ ಕೋಠಡಿಗಳಿವೆ. ತರಕಾರಿ, ಆಹಾರ, ಹಣ್ಣು ಮೊದಲಾದ ತ್ಯಾಜ್ಯಗಳಿಂದ ಫಲವತ್ತಾದ ಸಾವಯವ ಗೊಬ್ಬರ ಮಾಡುವ ಕೆಲಸ ನಡೆಯುತ್ತಿದೆ. ಕೆ.ಜಿಗೆ ಗರಿಷ್ಠ 8 ರೂ.ಗೆ ಗೊಬ್ಬರ ಮಾರಾಟ ಮಾಡಲಾಗುತ್ತದೆ. ತ್ಯಾಜ್ಯ ಪರಿಷ್ಕರಣೆಯಿಂದ 2 ಲಕ್ಷ ರೂ., ಕಸ ಸಂಗ್ರಹದಿಂದ 8 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.

ಕಸ ಸಂಗ್ರಹ: ಪಂಚಾಯಿತಿ ವಾಹನದಲ್ಲಿ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸುತ್ತ ಕಸ ಸಂಗ್ರಹ ಮಾಡಲಾಗುತ್ತದೆ. ಕೆಲವರು ಕಸ ವಿಂಗಡಿಸಿ ಕೊಡುತ್ತಾರೆ, ಕೆಲವರು ಒಟ್ಟಾಗಿ ತಂದು ಹಾಕುತ್ತಾರೆ. ಒಟ್ಟಾಗಿ ತಂದು ಹಾಕುವ ಕಸವನ್ನು ಪ್ರತ್ಯೇಕಿಸುವ ಕೆಲಸ ಹೆಚ್ಚುವರಿ ಹೊರೆಯಾಗುತ್ತದೆ. ತ್ಯಾಜ್ಯವನ್ನು ವ್ಯವಸ್ಥಿತ ನಿರ್ವಹಣೆ ಮಾಡುವುದರಿಂದ ಪರಿಸರ ಕೂಡ ಸ್ವಚ್ಛವಾಗಿದ್ದು, ಕೆಟ್ಟ ವಾಸನೆ ಇರುವುದಿಲ್ಲ. ಉಜಿರೆ ಗ್ರಾಮ ಪಂಚಾಯಿತಿಗೆ ಸಮೀಪದ ನಗರ ಪಂಚಾಯಿತಿ ವ್ಯಾಪ್ತಿಯ ಜನರು ಕಸ ತಂದು ಹಾಕುತ್ತಿರುವುದು ಬಹುದೊಡ್ಡ ಸಮಸ್ಯೆ. ಈ ಬಗ್ಗೆ ಗ್ರಾಮಸಭೆಗಳಲ್ಲಿ ನಿರ್ಣಯ ಕೈಗೊಂಡು ನಗರ ಪಂಚಾಯಿತಿಗೆ ನೀಡಲಾಗಿದೆ.

ತ್ಯಾಜ್ಯ ಸಂಪನ್ಮೂಲ ಘಟಕ ಪ್ರದೇಶದಲ್ಲಿ ಪ್ಲಾಸ್ಟಿಕ್ ರಿಸೈಕ್ಲಿಂಗ್ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ಇದರ ನಿರ್ವಹಣೆ ಬಗ್ಗೆ ವ್ಯಕ್ತಿಯೋರ್ವರು ಆಸಕ್ತಿ ವ್ಯಕ್ತಪಡಿಸಿದ್ದು, ಬಾಡಿಗೆ ಆಧಾರದಲ್ಲಿ ನೀಡುವ ಯೋಜನೆ ತಿಂಗಳೊಳಗೆ ಕಾರ್ಯ ಆರಂಭಿಸುವ ನಿರೀಕ್ಷೆ ಇದೆ. ಪ್ರಸ್ತುತ ನೆರಿಯದ ಪಶು ವೈದ್ಯಾಧಿಕಾರಿ ಡಾ.ಯತೀಶ್ ಕುಮಾರ್ ಆಡಳಿತಾಧಿಕಾರಿಯಾಗಿ ಹಾಗೂ ಪ್ರಕಾಶ್ ಶೆಟ್ಟಿ ನೊಚ್ಚ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಂಚಾಯಿತಿ ಆಡಳಿತ ಹಾಗೂ ಸಿಬ್ಬಂದಿ ಸಹಕಾರದಲ್ಲಿ ನಾಲ್ಕು ವರ್ಷಗಳಿಂದ ಕೇಂದ್ರದ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ತ್ಯಾಜ್ಯದ ಕುರಿತು ನಾಗರಿಕರ ಸ್ಪಂದನೆ ಕಡಿಮೆ ಇದೆ. ಪ್ರತಿಯೊಬ್ಬರು ತ್ಯಾಜ್ಯ ಸಂಗ್ರಹಕ್ಕೆ ಸಹಕರಿಸಿದರೆ ಉಜಿರೆಯನ್ನು ತ್ಯಾಜ್ಯ ಮುಕ್ತಗೊಳಿಸುವುದು ಸುಲಭ ಸಾಧ್ಯ. ರಾಮಚಂದ್ರ ಶೆಟ್ಟಿ ಉಜಿರೆ ಮೇಲ್ವಿಚಾರಕ, ತ್ಯಾಜ್ಯ ಸಂಪನ್ಮೂಲ ಕೇಂದ್ರ