ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ಮಹಾನಗರ ಪಾಲಿಕೆ ಕಚೇರಿಯ ಪ್ರವೇಶ ದ್ವಾರದಲ್ಲಿಯೇ ಗುರುವಾರ ಬೆಳಗ್ಗೆ ಬೃಹತ್ ಪ್ರಮಾಣದಲ್ಲಿ ಕಸ ತಂದು ಚೆಲ್ಲಲಾಗಿತ್ತು.
ಒಂದು ಟ್ರ್ಯಾಕ್ಟರ್ ಲೋಡ್ನಷ್ಟು ಕಸ ತಂದು ಸುರಿಯಲಾಗಿದೆ. ಅಲ್ಲಿಯೇ ಪಕ್ಕದಲ್ಲಿ ಕಳೆದ 8 ದಿನಗಳಿಂದ ಅನಿರ್ದಿಷ್ಟ ಅವಧಿಯ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಪಾಲಿಕೆ ನೇರ ಪಾವತಿ ಹಾಗೂ ಗುತ್ತಿಗೆ ಪೌರ ಕಾರ್ವಿುಕರು ತಾವು ಕಸ ಹಾಕಿಲ್ಲ ಎಂದು ಹೇಳಿಕೊಂಡಿದ್ದಾರೆ. ತಕ್ಷಣವೇ ಜೆಸಿಬಿ ಯಂತ್ರದಿಂದ ಕಸವನ್ನು ತೆರವುಗೊಳಿಸಲಾಗಿದೆ.
ಹೀಗಿರುವಾರ ಕಸ ಸುರಿದಿದ್ದು ಯಾರೂ ಎಂಬುದು ಚರ್ಚೆಯ ವಿಷಯವಾಗಿದೆ. ಪಾಲಿಕೆ ಕಚೇರಿ ಆವರಣದಲ್ಲಿ ಎಲ್ಲ ಕಡೆ ಸಿಸಿ ಕ್ಯಾಮೆರಾಗಳಿವೆ. ಯಾರು ಹಾಕಿದ್ದಾರೆ ಎಂದು ಪತ್ತೆ ಹಚ್ಚುವುದು ದೊಡ್ಡ ಸಂಗತಿಯಲ್ಲ, ಕಸ ಹಾಕಿದವರನ್ನು ಪತ್ತೆ ಹಚ್ಚಿ ಎಫ್ಐಆರ್ ದಾಖಲಿಸಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಗುರುವಾರ ಮಧ್ಯಾಹ್ನ ಹೇಳಿದ್ದರು. ಆದರೆ, ರಾತ್ರಿಯಾದರೂ ಎಫ್ಐಆರ್ ದಾಖಲಾಗಿರಲಿಲ್ಲ.
ಈ ಘಟನೆಯ ಬಳಿಕ ಪೊಲೀಸ್ ಆಯುಕ್ತ ಶಶಿಕುಮಾರ, ಪೊಲೀಸ್ ಅಧಿಕಾರಿಗಳು ಮಧ್ಯಾಹ್ನ ದಿಢೀರ್ ಆಗಿ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿದ್ದರು. ಬಳಿಕ ಶಶಿಕುಮಾರ ಅವರು ಧರಣಿ ನಿರತರನ್ನು ಭೇಟಿ ಮಾಡಿದ್ದರು.