ಉಪ್ಪಿನಂಗಡಿ: ಗ್ರಾಮ ಪಂಚಾಯಿತಿ ತ್ಯಾಜ್ಯ ನಿರ್ವಹಣೆ ಹೆಸರಿನಲ್ಲಿ ಗ್ರಾಮಸ್ಥರಿಂದ ಶುಲ್ಕ ಪಡೆದು ರೋಗರುಜಿನಗಳನ್ನು ಉಡುಗೊರೆಯಾಗಿ ನೀಡುತ್ತಿದೆಯೋ ಎಂಬಂತೆ ಸಂಗ್ರಹಿಸಲ್ಪಟ್ಟ ತ್ಯಾಜ್ಯಗಳನ್ನು ಕೆರೆಯೊಂದಕ್ಕೆ ಎಸೆದು ಅನಾರೋಗ್ಯಕರ ಸ್ಥಿತಿಯನ್ನು ಮೂಡಿಸುತ್ತಿರುವ ಬಗ್ಗೆ ತಣ್ಣೀರುಪಂತ ಗ್ರಾಮಸ್ಥರಿಂದ ದೂರು ಕೇಳಿ ಬಂದಿದೆ.
ಗ್ರಾಮದ ಅಳಕೆ ಸಮೀಪದ ಪದೆಂಜಲಾಪು ಎಂಬಲ್ಲಿ ತ್ಯಾಜ್ಯ ಎಸೆದು ಗಬ್ಬು ನಾರುತ್ತಿದ್ದು ಕಾಡುಹಂದಿ, ನಾಯಿ, ಕಾಗೆ ಪಕ್ಷಿಗಳು ತ್ಯಾಜ್ಯಗಳನ್ನು ಎಳೆದಾಡಿ ಪರಿಸರವಿಡೀ ದುರ್ನಾತಮಯವಾಗಿದೆ.
ಪಂಚಾಯಿತಿಗೆ ಸೇರಿದ 13 ಎಕರೆ ಜಾಗ ಇಲ್ಲಿದ್ದು, ಮುರಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳವಾಗಿತ್ತು. ಪ್ರಸಕ್ತ ಕೆರೆಯಂತೆ ನೀರು ಸಂಗ್ರಹಗೊಳ್ಳುತ್ತಿರುವ ಸ್ಥಳವಾಗಿದೆ. ಈ ಸ್ಥಳದಲ್ಲಿ ಊರಿನಿಂದ ಸಂಗ್ರಹವಾದ ತ್ಯಾಜ್ಯವನ್ನು ಎಸೆಯುತ್ತಿರುವ ಬಗ್ಗೆ ಸ್ಥಳೀಯರು ಆಕ್ಷೇಪವೆತ್ತಿದ್ದಾಗ ಎಸೆಯಲಾದ ತ್ಯಾಜ್ಯಕ್ಕೆ ಮಣ್ಣು ಹಾಸಿ ಕೃತ್ಯವನ್ನು ಮರೆಮಾಚಲಾಗಿದೆ. ಬಳಿಕ ಪಕ್ಕದ ಕೆರೆಗೂ ತ್ಯಾಜ್ಯವನ್ನು ಎಸೆಯಲಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಇದರಿಂದಾಗಿ ಈ ಪರಿಸರ ಸಾಂಕ್ರಾಮಿಕ ರೋಗಗಳನ್ನು ಪಸರಿಸುವ ಕೇಂದ್ರಗಳಾಗುತ್ತಿವೆ ಎನ್ನುವುದು ನಿವಾಸಿಗರ ಆತಂಕ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಯ ಎಂಬಲ್ಲಿ ಇರುವ ತ್ಯಾಜ್ಯ ಸಂಸ್ಕರಣ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದ್ದು, ವ್ಯವಸ್ಥಿತವಾದ ತ್ಯಾಜ್ಯ ಸಂಸ್ಕರಣೆ ಘಟಕವಿದ್ದರೂ ಯಾವುದೇ ಭೀತಿ ನಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುತ್ತಿರುವುದು ವಿಪರ್ಯಾಸ.
ಗ್ರಾಮದಲ್ಲಿ ತ್ಯಾಜ್ಯ ನಿರ್ವಹಣೆ ಹೆಸರಿನಲ್ಲಿ ಪ್ರತಿ ಅಂಗಡಿ ಹಾಗೂ ಮನೆಗಳಿಂದ ಶುಲ್ಕವನ್ನು ಪಡೆಯುತ್ತಿದ್ದರೂ ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಲು ಅಸಡ್ಡೆ ತೋರಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ.
ಸಮಸ್ಯೆಯ ತೀವ್ರತೆ ಬಗ್ಗೆ ಈಗಾಗಲೇ ಸ್ಥಳೀಯ ಪಂಚಾಯಿತಿ ಗಮನಕ್ಕೆ ತರಲಾಗಿದೆ. ಪದೆಂಜಲಾಪು ಜಾಗ ಪಂಚಾಯಿತಿಗೆ ಸೇರಿದಾಗಿದ್ದು, ಊರಿನ ಜನರ ಆರೋಗ್ಯದ ದೃಷ್ಟಿಯಿಂದಲಾದರೂ ಈ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರಭಾಕರ ಪಿ., ಸ್ಥಳೀಯರುಪ್ರಭಾಕರ ಪಿ., ಸ್ಥಳೀಯರು
ತ್ಯಾಜ್ಯವನ್ನು ಅನಾರೋಗ್ಯಕರವಾಗಿ ಎಸೆಯಲಾಗುತ್ತಿದೆ ಎಂಬ ದೂರಿನ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಈ ಹಿಂದಿನ ತ್ಯಾಜ್ಯ ನಿರ್ವಹಣೆ ನಡೆಸುತ್ತಿದ್ದವರ ಬಗ್ಗೆ ಬಂದ ದೂರಿನ ಬಳಿಕ ಈಗ ತ್ಯಾಜ್ಯ ನಿರ್ವಹಣೆ ಮಹಿಳೆಯರ ಸಂಜೀವಿನಿ ಒಕ್ಕೂಟಕ್ಕೆ ನೀಡಲಾಗಿದೆ. ತಪ್ಪೆಸಗಿದ್ದರೆ ತಿದ್ದುವುದಕ್ಕೆ ಸೂಚಿಸುತ್ತೇವೆ. ಶ್ರವಣ್, ಪಿಡಿಒಶ್ರವಣ್, ಪಿಡಿಒ
ಪದೆಂಜಲಾಪು ಪ್ರದೇಶದಲ್ಲಿ ತ್ಯಾಜ್ಯ ಎಸೆಯಲಾಗುತ್ತಿರುವ ಬಗ್ಗೆ ಮಾಹಿತಿ ಇರಲಿಲ್ಲ. ವ್ಯವಸ್ಥಿತವಾಗಿ ತ್ಯಾಜ್ಯ ನಿರ್ವಹಣೆಯ ಘಟಕವೇ ಇರುವಾಗ ಬೇರೆಲ್ಲೂ ತ್ಯಾಜ್ಯ ಎಸೆಯುವುದು ಸರಿಯಲ್ಲ. ದೂರಿನ ಸತ್ಯಾಸತ್ಯತೆಯ ಬಗ್ಗೆ ಪಿಡಿಒ ಅವರಿಂದ ಪರಿಶೀಲನೆ ನಡೆಸಲಾಗುವುದು. ಲೋಪವಿದ್ದರೆ ಅಗತ್ಯ ಕ್ರಮ ಜರುಗಿಸಲಾಗುವುದು. ಜಯವಿಕ್ರಮ್ ಕಲ್ಲಾಪು, ಪಂಚಾಯಿತಿ ಮಾಜಿ ಅಧ್ಯಕ್ಷಜಯವಿಕ್ರಮ್ ಕಲ್ಲಾಪು, ಪಂಚಾಯಿತಿ ಮಾಜಿ ಅಧ್ಯಕ್ಷ