ಹುಬ್ಬಳ್ಳಿ: ಕೆಟ್ಟದ್ದನ್ನು ಕೇಳಲಾರದೇ, ಕೆಟ್ಟ ವಿಷಯಗಳನ್ನು ಮಾತನಾಡದ ಕಿವುಡ ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶಗಳನ್ನು ಒದಗಿಸಿಕೊಟ್ಟರೆ ಏನೆಲ್ಲ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಈಶ್ವರಿ ಫೌಂಡೇಷನ್ ಅಧ್ಯಕ್ಷ ಸಂತೋಷ ವೆರ್ಣೇಕರ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ ಹಾಗೂ ಧಾರವಾಡ ಜಿಲ್ಲಾ ಕಿವುಡರ ಸಂಘದ ವತಿಯಿಂದ ನಗರದ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಏರ್ಪಡಿಸಿದ್ದ 20ನೇ ಕರ್ನಾಟಕ ರಾಜ್ಯ ಕಿವುಡರ ಚೆಸ್ ಚಾಂಪಿಯನ್‌ಶಿಪ್ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಇಂತಹ ಮಕ್ಕಳಿಗೆ ಒಳ್ಳೆಯದು ಮಾಡಬೇಕೆಂಬ ಭಾವನೆ, ಮನಸ್ಸು ಎಲ್ಲರಲ್ಲಿಯೂ ಬರಬೇಕು. ಎಲ್ಲರಂತೆ ಅವರನ್ನೂ ಕಾಣುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು. ಫೌಂಡೇಷನ್ ನಿಮ್ಮ ಸಹಾಯಕ್ಕೆ ಸದಾ ಸಿದ್ಧ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ಮೈಸೂರು ಪ್ರಥಮ, ಬೆಂಗಳೂರು ದ್ವೀತಿಯ, ಗದಗ ತೃತೀಯ ಸ್ಥಾನ ಪಡೆದಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಮೇಶ್ ಮಹದೇವಪ್ಪನವರ, ಸುರೇಶ್ ಗೋಕಾಕ, ಡಾ. ವಿಕ್ರಾಂತ ಪಾಟೀಲ್, ಮಹಾವೀರ ಗೊಂಗಡಿ, ಸಂಘದ ಅಧ್ಯಕ್ಷ ಉಮಾಶಂಕರ ಕೆ.ಎಸ್, ಸುಹಾಸ್ ಪುರೋಹಿತ, ಸತೀಶ್ ಕೋಲ್ಲಾಪುರ, ಕಾಶಿಮ ಕುಡ್ಲಗಿ ಉಪಸ್ಥಿತರಿದ್ದರು.