ಶಿವಮೊಗ್ಗ: ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಕೆ.ಪಿ.ದುಗ್ಗಪ್ಪ ಗೌಡ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರನ್ನು ಆಡಳಿತ ಮಂಡಳಿಗೆ ಕೋ ಅಪ್ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆರ್‌ಎಂಎಂ ಹಾದಿ ಸುಗಮವಾಗಲಿ ಎಂಬ ಕಾರಣಕ್ಕೆ ದುಗ್ಗಪ್ಪ ಗೌಡ ರಾಜೀನಾಮೆ ನೀಡಿದ್ದಾರೆ.
ಆರ್.ಎಂ.ಮಂಜುನಾಥಗೌಡರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ವೇಳೆ ಅವರ ವಿರುದ್ಧ ಕೇಳಿ ಬಂದಿದ್ದ ಆರೋಪಗಳಿಗಾಗಿ ಅವರು ಅಧ್ಯಕ್ಷ ಸ್ಥಾನ ಮಾತ್ರವಲ್ಲ ನಿರ್ದೇಶಕ ಸ್ಥಾನವನ್ನೂ ಕಳೆದುಕೊಳ್ಳಬೇಕಾಯಿತು. ಬಳಿಕ ನ್ಯಾಯಾಂಗ ಹೋರಾಟ ನಡೆಸಿದ ಅವರು, ನಿರ್ದೇಶಕ ಸ್ಥಾನ ರದ್ದತಿ ವಿರುದ್ಧ ಆದೇಶ ಪಡೆದುಕೊಂಡರು. ಕೆಲ ದಿನಗಳ ಹಿಂದಷ್ಟೇ ಎಂ.ಬಿ.ಚನ್ನವೀರಪ್ಪ ಅವರನ್ನು ಅವಿಶ್ವಾಸ ಮಂಡನೆ ಮೂಲಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದೀಗ ದುಗ್ಗಪ್ಪ ಗೌಡರ ರಾಜೀನಾಮೆಯೊಂದಿಗೆ ಆರ್‌ಎಂಎಂ ಡಿಸಿಸಿ ಬ್ಯಾಂಕ್ ಪ್ರವೇಶಕ್ಕೆ ಹಾದಿ ಸುಗಮವಾದಂತಾಗಿದೆ.