ಸರಗೂರು: ಭತ್ತದ ನಾಟಿ ಮಾಡಲು ಯಂತ್ರ ಬಳಕೆ ಮಾಡುವುದರಿಂದ ಕೃಷಿ ಕಾರ್ಮಿಕರ ಸಂಖ್ಯೆ ಕಡಿಮೆಗೊಳಿಸಬಹುದು. ಸಮಯಕ್ಕೆ ಸರಿಯಾಗಿ ನಾಟಿ ಕಾರ್ಯ ಮುಗಿಸಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ವಿಭಾಗದ ಯೋಜನಾಧಿಕಾರಿ ಸುಧೀರ್ ಜೈನ್ ತಿಳಿಸಿದರು.
ತಾಲೂಕಿನ ಕೆ.ಬೆಳ್ತೂರು ಗ್ರಾಪಂ ವ್ಯಾಪ್ತಿಯ ಕಾಳಿಹುಂಡಿ ಗ್ರಾಮದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್, ಎಚ್.ಡಿ.ಕೋಟೆ ವತಿಯಿಂದ ಯಂತ್ರಶ್ರೀ ಭತ್ತ ಬೇಸಾಯದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಟಿ ಯಂತ್ರಕ್ಕೆ ಟ್ರೈ ಮೂಲಕ ಭತ್ತದ ಸಸಿ ಮಡಿ ತಯಾರಿಸಲು ಕಡಿಮೆ ಜಾಗ ಸಾಕಾಗುತ್ತದೆ. ಎರಡೂವರೆಯಿಂದ ಮೂರು ಗಂಟೆ ಅವಧಿಯಲ್ಲಿ ಒಂದು ಎಕರೆ ನಾಟಿ ಆಗುತ್ತದೆ. ನಾಟಿ ಯಂತ್ರ ಬಳಕೆಯಿಂದ ಶೇ.30ರಷ್ಟು ವೆಚ್ಚ ಕಡಿಮೆ ಮಾಡಬಹುದು ಎಂದು ತಿಳಿಸಿದರು.
ತಾಲೂಕು ಕೃಷಿ ಸಹಾಯಕ ನಿರ್ದೇಶಕ ಜಯರಾಮಯ್ಯ ಮಾತನಾಡಿ, ಪ್ರತಿಯೊಂದು ಬೆಳೆಗಳಿಗೆ ರೈತರು ಬೀಜೋಪಚಾರ ಮಾಡುವುದು ಬಹಳ ಮುಖ್ಯ. ಉತ್ತಮ ಗುಣಮಟ್ಟದ ಭತ್ತ ಬಿತ್ತನೆ ಬೀಜದ ಆಯ್ಕೆಗಾಗಿ 1:4 ಪ್ರಮಾಣದ ಉಪ್ಪಿನ ನೀರಿನ ದ್ರಾವಣದಲ್ಲಿ ಭತ್ತದ ಬೀಜವನ್ನು ಹಾಕಿ ಜೊಳ್ಳು ಮತ್ತು ಅರೆ ಜೊಳ್ಳು ಬೀಜಗಳನ್ನು ಬೇರ್ಪಡಿಸಿ ಮತ್ತೆ ಸಿಹಿ ನೀರಿನಲ್ಲಿ 2-3 ಬಾರಿ ಚೆನ್ನಾಗಿ ತೊಳೆದು ಬಿತ್ತನೆಗೆ ಉಪಯೋಗಿಸುವುದರ ಬಗ್ಗೆ ತಿಳಿಸಿಕೊಟ್ಟರು.
ಸಂಸ್ಥೆ ಸಿರಿಧಾನ್ಯ ವಿಭಾಗದ ಯೋಜನಾಧಿಕಾರಿ ಜಯಾನಂದ, ಎಚ್.ಡಿ.ಕೋಟೆ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಜಯರಾಮಯ್ಯ, ಜಿಲ್ಲಾ ಜನಜಾಗೃತಿ ಸದಸ್ಯ ಕನ್ನಡ ಪ್ರಮೋದ್, ಕೃಷಿ ಮೇಲ್ವಿಚಾರಕರಾದ ಬಿ.ಜೆ.ರಾಜು, ನಾಟಿಯಂತ್ರ ಬ್ಯಾಂಕ್ ಕೃಷಿ ಮೇಲ್ವಿಚಾರಕ ನವೀನ್‌ಕುಮಾರ್, ವಲಯ ಮೇಲ್ವಿಚಾರಕಿ ಪವಿತ್ರಾ, ಒಕ್ಕೂಟದ ಅಧ್ಯಕ್ಷ ಟಿ.ಸೋಮೇಶ, ತಾಲೂಕು ನೋಡಲ್ ಅಧಿಕಾರಿ ದೇವರಾಜ್, ವಿಜಯ್‌ಕುಮಾರ್, ಸೇವಾ ಪ್ರತಿನಿಧಿ ಮಹೇಶ್, ಉಷಾ, ಶೈಲೇಂದ್ರ, ಯಂತ್ರಶ್ರೀ ಯೋಧ ನಾಗರಾಜು, ಪ್ರಗತಿಪರ ರೈತ ಜಿತೇಂದ್ರಕುಮಾರ್, ರೈತರು ಉಪಸ್ಥಿತರಿದ್ದರು.