ಹೊಸದುರ್ಗ: ಹಿಂದಿನ ಜನಪ್ರತಿನಿಧಿಗಳ ಬೇಜಾವಾಬ್ದಾರಿಗೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಅಭಿವೃದ್ಧಿ ಹಾಗೂ ಶ್ರೇಣಿಯಲ್ಲಿ ಹಿನ್ನಡೆ ಅನುಭವಿಸಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಸಭೆಯಲ್ಲಿ ಮಾತನಾಡಿದರು.
ಕಳೆದ ಮೂರು ಅವಧಿಯಲ್ಲಿ ಶಾಸಕನಾಗಿ ಆಯ್ಕೆಯಾದಾಗ ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಟ್ಟಡ, ಸಿಬ್ಬಂದಿ ಸೇರಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಪ್ರಥಮ ಶ್ರೇಣಿ ಕಾಯ್ದುಕೊಳ್ಳುವಂತೆ ಮಾಡಿದ್ದೆ. ಆದರೆ, ಕಳೆದ ಬಾರಿಯ ಜನಪ್ರತಿನಿಧಿಗಳು ಒಂದು ದಿನವೂ ಕಾಲೇಜ್‌ಗೆ ಭೇಟಿ ನೀಡದೆ ಇಲ್ಲಿನ ಸ್ಥಿತಿಗತಿ ತಿಳಿಯದೆ ಕಾಲೇಜು ತೃತಿಯ ಶ್ರೇಣಿಗೆ ಕುಸಿಯುವಂತೆ ಮಾಡಿದ್ದಾರೆ ಎಂದು ದೂರಿದರು.
ಕಾಲೇಜ್ ಕಟ್ಟಡ ನಿರ್ಮಾಣಕ್ಕಾಗಿ 75 ಲಕ್ಷ ರೂ. ಗಳನ್ನು ಸರ್ಕಾರ ಮಂಜೂರು ಮಾಡಿದೆ. ಅದರೆ, ಮುಖ್ಯ ಕಟ್ಟಡದ ಛಾವಣಿ ಮಳೆಯಿಂದ ಸೋರುತ್ತಿದೆ. ಹೊಸ ಕಟ್ಟಡ ಕಟ್ಟುವ ಬದಲು ತುರ್ತಾಗಿ ಸದರಿ ಅನುದಾನ ಬಳಸಿಕೊಂಡು ಛಾವಣಿ ದುರಸ್ತಿ ಹಾಗೂ ನಿರ್ವಹಣೆ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯವಾಗಿ ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಶೌಚಗೃಹದ ಸಮಸ್ಯೆಯಿದೆ ಎನ್ನುವ ದೂರು ಪಾಲಕರು ಹಾಗೂ ಕಾಲೇಜಿನ ಸಿಬ್ಬಂದಿಯಿಂದ ಕೇಳಿಬರುತ್ತಿದೆ. ತಾಲೂಕು ಪಂಚಾಯಿತಿ ಅನುದಾನ ಬಳಸಿಕೊಂಡು ಕೂಡಲೇ ಸುಸಜ್ಜಿತ ಶೌಚಗೃಹ ನಿರ್ಮಾಣಕ್ಕೆ ತಾಪಂ ಅಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಪ್ರಾಚಾರ್ಯೆ ಭ್ರಮರಾಂಭಾ, ಸಿಡಿಸಿ ಸದಸ್ಯ ಇ.ವಿ.ಅಜ್ಜಪ್ಪ ಮತ್ತಿತರಿದ್ದರು.