ಪ್ರಸ್ತುತ ತಿಂಗಳಿನಿಂದ ವಿದ್ಯುತ್ ದರ ಗಣನೀಯವಾಗಿ ಏರಿಕೆಯಾಗಿದ್ದು, ಸಾಮಾನ್ಯ ಜನರು ಹಾಗೂ ಉದ್ಯಮಿಗಳು ಭಾರಿ ನಷ್ಟ ಅನುಭವಿಸಬೇಕಾಗಿ ಬಂದಿದೆ. ಹೀಗಾಗಿ ಸರ್ಕಾರ ದರ ಏರಿಕೆ ಮರು ಪರಿಶೀಲಿಸಬೇಕು ಎಂದು ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಮನವಿ ಮಾಡಿದೆ.
ನಿಯಮದ ಪ್ರಕಾರ ವರ್ಷಕ್ಕೊಮ್ಮೆ ಸಾಮಾನ್ಯವಾಗಿ ವಿದ್ಯುತ್ ದರ ಹೆಚ್ಚಳ ಮಾಡಬೇಕು. ಈ ನಿಟ್ಟಿನಲ್ಲಿ 50 ಪೈಸೆಯನ್ನಷ್ಟೇ ಹೆಚ್ಚಳ ಮಾಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಈಗ ಬಿಲ್‌ನಲ್ಲಿ ಕಾಣುವಂತೆ ನಿಗದಿತ ಪಟ್ಟಿಯಲ್ಲಿ ಶೇ.60ರಷ್ಟು ಹೆಚ್ಚಳ ಮಾಡಲಾಗಿದೆ. ಅಲ್ಲದೆ ಹೊಂದಾಣಿಕೆ ಶುಲ್ಕ ಸಹ ಗಣನೀಯವಾಗಿ ಹೆಚ್ಚಳವಾಗಿದೆ. ವಿವಿಧ ರೀತಿಯ ವಿದ್ಯುತ್ ಬಳಕೆಗೂ ಬೇರೆ ಬೇರೆ ರೀತಿಯಲ್ಲಿ ದರ ಏರಿಕೆ ಮಾಡಲಾಗಿದೆ. ಇದರಿಂದಾಗಿ ಗೃಹ ಬಳಕೆದಾರರು ಮಾತ್ರವಲ್ಲ, ಕೈಗಾರಿಕೆಗಳು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯದರ್ಶಿ ಎಂ.ಆರ್.ಜಯರಾಂ ಮಾತನಾಡಿ, ನೆರೆ ರಾಜ್ಯಗಳಲ್ಲಿ ಹೊಂದಾಣಿಕೆ ಶುಲ್ಕವಿಲ್ಲ. ಕೆಲವು ರಾಜ್ಯಗಳಲ್ಲಿ ನಿಗದಿತ ಶುಲ್ಕ ಸಹ ಇಲ್ಲ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಈ ಪದ್ಧತಿ ಏಕೆ ಜಾರಿಯಲ್ಲಿದೆ? ಜತೆಗೆ ಹೊಂದಾಣಿಕೆ ಶುಲ್ಕವನ್ನು ಏಕೆ ಹೆಚ್ಚಳ ಮಾಡಲಾಗಿದೆ ಎಂಬ ಬಗ್ಗೆ ಸರ್ಕಾರ ಉತ್ತರ ನೀಡಬೇಕೆಂದು ಎಂದು ಒತ್ತಾಯಿಸಿದರು.
ಸಾಮಾನ್ಯವಾಗಿ ವಿದ್ಯುತ್ ದರ ಹೆಚ್ಚಳ ಮಾಡಬೇಕೆಂದರೆ ಮೊದಲು ವಾಣಿಜ್ಯೋದ್ಯಮಿಗಳ ಸಲಹೆ ಪಡೆಯಬೇಕು. ಒಂದು ಸಭೆ ನಡೆಸಿ, ಈ ಬಗ್ಗೆ ಮೊದಲೇ ತಿಳಿಸಿ ನಂತರ ನಿರ್ಧಾರ ಕೈಗೊಳ್ಳಬೇಕು. ಆದರೆ ಇಲ್ಲಿ ವಿದ್ಯುತ್ ಇಲಾಖೆ ಯಾರ ಅಭಿಪ್ರಾಯವನ್ನೂ ಪಡೆದಿಲ್ಲ. ಅವೈಜ್ಞಾನಿಕವಾಗಿ ದರ ಹೆಚ್ಚಳ ಮಾಡಲಾಗಿದೆ. ಇದು ನಿಗಮದ ಸ್ವತಂತ್ರ ನಿರ್ಧಾರ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಎಲ್ಲ ನಿಗಮ ಮಂಡಳಿಗಳೂ ಸರ್ಕಾರದ ಅಧೀನದಲ್ಲಿಯೇ ಇರುತ್ತವೆ. ಹೀಗಾಗಿ ಸರ್ಕಾರ ಕೂಡಲೇ ಉದ್ಯಮಿಗಳಿಗೆ ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ಆರ್ಥಿಕ ಹೊರೆ ತಪ್ಪಿಸಬೇಕು. ವಿದ್ಯುತ್ ದರ ಏರಿಕೆಯನ್ನು ಮರುಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಸಿ.ನಾರಾಯಣಗೌಡ, ಸತ್ಯನಾರಾಯಣ, ಸುಧೀಂದ್ರ ಇತರರಿದ್ದರು.