ವಿರಾಜಪೇಟೆ : ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ನೀಡುತ್ತಿರುವ ಬಿಪಿಎಲ್ ಪಡಿತರ ಚೀಟಿ ಮತ್ತು ಅರ್ಥಿಕವಾಗಿ ಸ್ಥಿತಿವಂತರಿಗೆ ಎ.ಪಿ.ಎಲ್ ಪಡಿತರ ಚೀಟಿಗಳಿಗೆ ಸರ್ಕಾರ ಇದೀಗಾ ತಿದ್ದುಪಡಿ ಮತ್ತು ಹೊಸದಾಗಿ ಪಡಿತರ ಚೀಟಿ ವಿತರಣೆಗೆ ಅವಕಾಶ ಕಲ್ಪಿಸಿದೆ. ಅದರೆ ಸರ್ವರ್ ಸಮಸ್ಯೆಯಿಂದಾಗಿ ದಿನಕ್ಕೆ ಒಂದು ಅಥವಾ ಎರಡು ಪಡಿತರ ಚೀಟಿಗಳು ಮಾತ್ರ ಯಶಸ್ವಿಯಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನರು ತೊಂದರೆಗೆ ಸಿಲುಕಿದ್ದಾರೆ ಎಂದು ಸಿಪಿಐ (ಎಂ) ಪಕ್ಷದ ವಿರಾಜಪೇಟೆ ಘಟಕದ ಕಾರ್ಯದಿರ್ಶಿ ಕೆ.ಎಸ್. ರಮೇಶ್ (ಶಾಜಿ) ಕಿಡಕಾರಿದರು.
ಲೋಕಸಭಾ ಚುನಾವಣೆ ಮತ್ತು ಇನ್ನಿತರ ಕಾರಣಗಳಿಂದ ಹೊಸದಾಗಿ ಪಡಿತರ ಚೀಟಿ ನೀಡುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ಬೋಗಸ್ ಪಡಿತರ ಚೀಟಿಗಳನ್ನು ಕಂಡು ಹಿಡಿಯಲು ತಿದ್ದುಪಡಿಗೆ ಕಾಲಾವಕಾಶ ನೀಡಿತ್ತು. ಇದು ಅವೈಜ್ಞಾನಿಕವಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ದುರ್ಬಲರು, ಮಹಿಳೆಯರು, ವೃದ್ಧರು, ಕಾರ್ಮಿಕರು ಕಾದು ಕುಳಿತ್ತಿದ್ದರು. ಸಾರ್ವಜನಿಕರು ಸರ್ಕಾರದ ಈ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಕೇವಲ ಎರಡು ದಿನಗಳಲ್ಲಿ ಯಾವುದೇ ಸಮಸ್ಯೆಗಳು ಬಗೆಹರಿಯುವುದಿಲ್ಲ. ಇತಂಹ ಯೋಜನೆ ಮತ್ತು ಆದೇಶಗಳನ್ನು ಮಾಡುವ ಅಧಿಕಾರಿಗಳನ್ನು ಧಿಕ್ಕರಿಸಬೇಕು. ಸ್ವಪ್ರಜ್ಞೆಯಿಲ್ಲದ ಸರ್ಕಾರದ ಕಾನೂನುಗಳು ಮತ್ತು ಅದೇಶದಿಂದ ಬಡವರಿಗೆ ತೊಂದರೆಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸಿ.ಪಿ.ಐ.(ಎಂ) ಜಿಲ್ಲಾ ಸಂಘಟನಾ ಸಮಿತಿಯ ಸದಸ್ಯ ಎ.ಸಿ.ಸಾಬು ಮಾತನಾಡಿ, ರಾಜ್ಯ ಸರ್ಕಾರವು ಪಡಿತರ ಚೀಟಿಗೆ ತಿದ್ದುಪಡಿ ಮತ್ತು ಹೊಸ ಪಡಿತರ ಚೀಟಿ ವಿತರಣೆಗೆ ಸಮಯ ಮಿತಿ ನಿಗದಿಗೊಳಿಸಿರುವುದು ಅಸಂಬದ್ಧವಾಗಿದೆ. ಒಂದು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಬಡ ಕುಟುಂಬದೊಂದಿಗೆ ಸರ್ಕಾರವು ಚೆಲ್ಲಾಟವಾಡುತ್ತಿದೆ. ಪಡಿತರ ಚೀಟಿ ಸಮಸ್ಯೆಗೆ ಎರಡು ತಿಂಗಳ ಕಾಲವಕಾಶ ನೀಡುವಂತಾಗಬೇಕು. ಸಮಸ್ಯೆಗೆ ಪರಿಹಾರ ದೊರಕಬೇಕು. ಇಲ್ಲದೆ ಹೋದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಿ.ಪಿ.ಐ.(ಎಂ) ವಿರಾಜಪೇಟೆ ಘಟಕದ ಸದಸ್ಯರಾದ ಕೆ.ಕೆ.ಹರಿದಾಸ್ ಉಪಸ್ಥಿತರಿದ್ದರು.