ಜಿಲ್ಲೆ

ರಾಜಕೀಯ ಕಾರಣಕ್ಕೆ ಕೆಲವು ಸ್ವಾಮೀಜಿಗಳಿಂದ ರಾಮಮಂದಿರ ಉದ್ಘಾಟನೆಗೆ ಅಪಸ್ವರ : ಪ್ರತಾಪ್ ಸಿಂಹ

ಮೈಸೂರು: ಆಯೋಧ್ಯೆ ರಾಮಮಂದಿರ ಉದ್ಘಾಟನೆ ವಿಚಾರಕ್ಕೆ ಶಂಕರಚಾರ್ಯ ಮಠದ ಕೆಲವು ಸ್ವಾಮೀಜಿಗಳು ರಾಜಕೀಯ ಕಾರಣಕ್ಕೆ ಅಪಸ್ವರ ಎತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಂಕರಚಾರ್ಯ ಮಠದಲ್ಲಿನ ಕೆಲವು ಸ್ವಾಮೀಜಿಗಳ ರಾಜಕೀಯ ಸಿದ್ಧಾಂತಗಳು ಜನರಿಗೆ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಲೇ ಬೇಕು ಅಂತ ಹೋರಾಟ ಮಾಡಿದ ಕೆಲ ಸ್ವಾಮೀಜಿಗಳು ಇದರಲ್ಲಿ ಇದ್ದಾರೆ. ಅವರಿಂದ ಬೇರೆ ಏನು ನೀರಿಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಅಯೋಧ್ಯೆಯ ರಾಮಜನ್ಮಭೂಮಿಯ ಟೆಂಟ್‌ನಲ್ಲಿ ಈ ಹಿಂದೆ ಎರಡು ಗೊಂಬೆಗಳನ್ನು ಸ್ಥಾಪಿಸಿ ರಾಮ ರಾಮ ಅನ್ನುತ್ತಿದ್ದರು ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಉಪಮುಖ್ಯಮಂತ್ರಿ ಸ್ಥಾನದ ಆಸೆಗಾಗಿ ಸಚಿವ ಕೆ.ಎನ್.ರಾಜಣ್ಣ ಇಂತಹ ಮಾತುಗಳನ್ನು ಆಡುತ್ತಿದ್ದಾರೆ. ವಾಲ್ಮೀಕಿ ಸಮುದಾಯ ಶ್ರೀರಾಮನನ್ನು ಎದೆಯಗೂಡಿನಲ್ಲಿ ಇಟ್ಟುಕೊಂಡಿದ್ದಾರೆ. ರಾಜಣ್ಣ ಅದೇ ಸಮುದಾಯಕ್ಕೆ ಸೇರಿದವರು. ಇಂತಹವರು ಟಿಪ್ಪು ಜಯಂತಿ ಆಚರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಓಲೈಸಲು ಇಲ್ಲಸಲ್ಲದ ಮಾತು ಆಡುತ್ತಿದ್ದಾರೆ. ಇಂತವರಿಗೆಲ್ಲ ಜನರೇ ಉತ್ತರ ಕೊಡುತ್ತಾರೆ ಎಂದರು.