ಜಿಲ್ಲೆ

ಭಾರಿ ಮಳೆಯಿಂದ ಬೆಣ್ಣೆ ಹಳ್ಳಕ್ಕೆ ಪ್ರವಾಹ ಭೀತಿ!, ಮಲಪ್ರಭಾ ತೀರದಲ್ಲಿ ಆತಂಕದ ಸ್ಥಿತಿ

ನರಗುಂದ: ಪಟ್ಟಣ ಸೇರಿ ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಬೆಣ್ಣೆ ಹಳ್ಳ, ಕೊಳ್ಳಗಳೆಲ್ಲವೂ ತುಂಬಿ ಹರಿಯುತ್ತಿವೆ. ಪರಿಣಾಮ ಕೆಲ ಗ್ರಾಮಗಳ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ವಿವಿಧ ಗ್ರಾಮಗಳಲ್ಲಿ ಜಮೀನಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಬೆಳೆಗಳಿಗೆ ಜಲಕಂಟಕ ಎದುರಾಗಿ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ.


ಗುರುವಾರ ಸಂಜೆಯಿಂದ ಆರಂಭವಾದ ಮಳೆ ಶುಕ್ರವಾರ ಇಡೀ ದಿನ ಸುರಿದಿದೆ. ತಾಲೂಕಿನ ಕುರ್ಲಗೇರಿ, ಯಾವಗಲ್ಲ್ ಮುಂದಿನ ಬೆಣ್ಣೆಹಳ್ಳದ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ವಿವಿಧ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕುರ್ಲಗೇರಿ, ಸುರಕೋಡ, ಬನಹಟ್ಟಿ, ಮೂಗನೂರ ಮುಂತಾದ ಗ್ರಾಮಗಳ ಬಳಿ ತುಂಬಿ ಹರಿಯುತ್ತಿರುವ ಬೆಣ್ಣೆಹಳ್ಳದ ಪ್ರವಾಹಕ್ಕೆ ಹಿಂಗಾರು ಹಂಗಾಮಿನ ಹತ್ತಿ, ಗೋವಿನಜೋಳ, ಮುಂತಾದ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಬೆಣ್ಣೆಹಳ್ಳದ ಪ್ರವಾಹ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಕುರ್ಲಗೇರಿ, ಬನಹಟ್ಟಿ, ಮೂಗನೂರ, ಸುರಕೋಡ ಗ್ರಾಮದ ಸುತ್ತಲೂ ನೀರು ಆವರಿಸಿಕೊಂಡಿದೆ.

ಪಟ್ಟಣದಲ್ಲಿ ಸುರಿದ ಮಳೆಗೆ ಚರಂಡಿಗಳು ತುಂಬಿ ಹರಿದ ಪರಿಣಾಮ ಬೆಳವಟಗಿಯವರ ಪ್ಲಾಟ್​ನ ಲಕ್ಕವ್ವ ಮುತ್ತಣ್ಣವರ, ಯಲ್ಲವ್ವ ಪಿರಂಗಿ. ಕೃಷ್ಣಾನಗರ ಹಾಗೂ ಅರ್ಭಣಾ ಬಡಾವಣೆಯ ಶ್ರೀ ಕಲ್ಮೇಶ್ವರ ದೇವಸ್ಥಾನ ಬಳಿಯ ವಿವಿಧ ಮನೆಗಳಿಗೆ ನೀರು ನುಗ್ಗಿದ್ದರಿಂದ ಕುಟುಂಬಸ್ಥರು ಮಳೆ ನೀರು ಹೊರಹಾಕಲು ಪರದಾಡುವಂತಾಯಿತು.


ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕ ಸಿ.ಸಿ. ಪಾಟೀಲ ಅಧಿಕಾರಿಗಳ ಸಮೇತ ತಾಲೂಕಿನ ಕುರ್ಲಗೇರಿ ಗ್ರಾಮಕ್ಕೆ ಭೇಟಿ ನೀಡಿದರು. ನಿರಂತರ ಮಳೆ ಮುಂದುವರಿದರೆ ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ನದಿ ಪಾತ್ರದ ವಿವಿಧ ಗ್ರಾಮಗಳಿಗೆ ನೀರು ನುಗ್ಗುವ ಸಂಭವ ಹೆಚ್ಚಿದೆ. ಮಳೆಯಿಂದ ಮನೆಗಳು ಬಿದ್ದಿದ್ದರೆ ಅಂತವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು. ಪ್ರವಾಹ ಪೀಡಿತ ಗ್ರಾಮಗಳ ಜನ, ಜಾನುವಾರುಗಳ ಸುರಕ್ಷತೆಗೆ ತಾಲೂಕು ಆಡಳಿತದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಶಾಸಕ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ, ತಾಪಂ ಇಒ ಎಸ್.ಕೆ. ಇನಾಂದಾರ, ಈಶ್ವರಗೌಡ ಪಾಟೀಲ, ಪಿಡಿಒ ಎಂ.ಎಂ. ಪೂಜಾರ, ಎಸ್.ಎಲ್. ಪೂಜಾರ, ಪ್ರವೀಣ ಬ್ಯಾಹಟ್ಟಿ, ಶ್ರುತಿ ಭಜಂತ್ರಿ, ಮಂಜು ಬ್ಯಾಹಟ್ಟಿ, ಶರಣಪ್ಪ ಬಾರಕೇರ, ಬಸಪ್ಪ ಮೆಣಸಗಿ, ನಾಗರಾಜ ನೆಗಳೂರ, ಉಮೇಶಗೌಡ ಪಾಟೀಲ ಫಕೀರಪ್ಪ ಮಾದರ, ಇತರರಿದ್ದರು.

ಶವ ಸಂಸ್ಕಾರಕ್ಕೆ ಹೆಣಗಾಟ: ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದ ರೈತ ಫಕ್ರುಸಾಬ ಮಕ್ತುಮಸಾಬ ಹವಾಲ್ದಾರ (35) ಎಂಬುವರು ಗುರುವಾರ ಬೆಳಗ್ಗೆ ಜಮೀನಿಗೆ ತೆರಳಿದ್ದರು. ಹೊಲದಲ್ಲಿ ಪೇರಲ ಗಿಡ ಕೀಳುತ್ತಿದ್ದಾಗ ಕಾಲಿಗೆ ದಾಸರ ಹಾವು (ರಸ್ಸೆಲ್ಸ್ ವೈಫರ್) ಕಚ್ಚಿದೆ. ಗಂಭೀರ ಗಾಯಗೊಂಡಿದ್ದ ಫಕ್ರುಸಾಬನನ್ನು ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿಯೇ ಮೃತಪಟ್ಟಿದ್ದರು. ಕುರ್ಲಗೇರಿಯಲ್ಲಿ ಶುಕ್ರವಾರ ಶವಸಂಸ್ಕಾರ ಮಾಡಲು ಬೆಣ್ಣೆಹಳ್ಳದ ಪ್ರವಾಹ ಅಡ್ಡಿಯಾಗಿದೆ. ಗ್ರಾಮದ ಸುತ್ತಲೂ ನೀರು ಆವರಿಸಿಕೊಂಡಿದ್ದರಿಂದ ಶವಸಂಸ್ಕಾರಕ್ಕೆ ಬಂದವರು ಜಲದಿಗ್ಭಂಧನ ಎದುರಿಸುವಂತಾಯಿತು. ಕುಟುಂಬಸ್ಥರು, ಸಂಬಂಧಿಕರು ನಡು ನೀರಿನಲ್ಲಿಯೇ ಶವಹೊತ್ತು ಖಬರಸ್ತಾನಕ್ಕೆ ತೆರಳಿ ಅಂತ್ಯಸಂಸ್ಕಾರ ನೆರವೇರಿಸಿದರು.