ಜಿಲ್ಲೆ

ನ್ಯಾಯಮೂರ್ತಿ ಕಡೆ ಶೂ ಎಸೆಯಲೆತ್ನಿಸಿದ ವಕೀಲನ ವಿರುದ್ಧ ಕ್ರಮಕ್ಕೆ ಆಗ್ರಹ: ಡಿಸಿ ಕಚೇರಿ ಬಳಿ ದಸಂಸ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಿಜೆಐ ಬಿ.ಆರ್.ಗವಾಯಿ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲೆತ್ನಿಸಿರುವುದು ಅಮಾನವೀಯ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು, ಜಿಲ್ಲಾಧಿಕಾರಿ ಕುಮಾರ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಶೂ ಎಸೆಯಲೆತ್ನಿಸಿರುವುದು ಒಬ್ಬ ನ್ಯಾಯಮೂರ್ತಿ ಅಥವಾ ನ್ಯಾಯಾಲಯದ ಮೇಲೆ ನಡೆದ ದಾಳಿಯಲ್ಲ. ಇದು ಭಾರತದ ಸಂವಿಧಾನದ ಮೇಲೆ ನಡೆಸಿರುವ ದಾಳಿಯಾಗಿದೆ. ಈ ದಾಳಿಯನ್ನು ನಡೆಸಿರುವ ಮನುವಾದಿ ಮನಸ್ಥಿತಿಯುಳ್ಳ ರಾಕೇಶ್ ಕಿಶೋರ್ ಮೇಲೆ ದೇಶದ್ರೋಹಿ ಮತ್ತು ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕು ಎಂದು ಮನವಿ ಮಾಡಿದರು.

ದಲಿತ ಸಮುದಾಯಕ್ಕೆ ಸೇರಿರುವ ಬಿ.ಆರ್.ಗವಾಯಿ ಅವರು ಸಾಮಾಜಿಕ ಅಸಮಾನತೆಯನ್ನು ಎದುರಿಸಿ ಅರ್ಹತೆ ಮತ್ತು ತಮ್ಮ ಸ್ವಸಾಮರ್ಥ್ಯದ ಮೂಲಕ ಉನ್ನತ ಸ್ಥಾನಕ್ಕೆ ಏರಿದವರು. ಸಂವಿಧಾನ ಜಾರಿಗೆ ಬಂದು 75 ವರ್ಷ ನಂತರವೂ ಜಾತೀಯತೆ ಹಾಗೂ ಅಸಮಾನತೆಯು ಕೋಮುವಾದಿಗಳ ಮನಸ್ಸಿನಲ್ಲಿ ಇನ್ನೂ ಬೇರೂರಿದೆ ಎನ್ನುವುದಕ್ಕೆ ಶೂ ಎಸೆದಿರುವುದೇ ಸಾಕ್ಷಿ ಎಂದು ಆರೋಪಿಸಿದರು.

ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಹಾಕಿ ಪರಸ್ಪರ ದ್ವೇಷ ಮತ್ತು ಅಸಹನೆ ಹುಟ್ಟು ಹಾಕಿರುವ ವಿಕೃತ ಮನಸ್ಸುಗಳು ಇವತ್ತು ದೇಶದಲ್ಲಿ ವಿಜೃಂಭಿಸುತ್ತಿವೆ. ರಾಕೇಶ್ ಕಿಶೋರ್ ಅಂತಹ ಮನುವಾದಿ ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ. ಗವಾಯಿ ಅವರಿಗೆ ಹಾಗೂ ನ್ಯಾಯಾಲಯಕ್ಕೆ ಅಪಮಾನ ಸರಿಯಲ್ಲ, ಇದು ನಿಲ್ಲಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ರಮಾನಂದ, ಕುಬೇರಪ್ಪ, ತಗ್ಗಹಳ್ಳಿ ಬಸವರಾಜ್, ಕೆಂಪಯ್ಯ ಸಾಗ್ಯ, ದೇವರಾಜು ಜಕ್ಕನಹಳ್ಳಿ, ಶಿವಲಿಂಗಯ್ಯ ಭಾಗವಹಿಸಿದ್ದರು.