ಮಡಿಕೇರಿ:
ಅಂಬೇಡ್ಕರ್ ಮುಂದಾಳತ್ವದಲ್ಲಿ ರಚನೆಯಾದ ಸಂವಿಧಾನ ನಮ್ಮ ಬದುಕಿನಲ್ಲಿ ಬಹಳಷ್ಟು ಮುಖ್ಯವಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದ ದ್ವಿತೀಯ ಪಿ.ಯು.ಸಿ. ಮತ್ತು
ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳು ಹಾಗೂ ಫಲಿತಾಂಶ ಬರಲು ಕಾರಣರಾದ ಶಿಕ್ಷಕರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಜನರು ಯಾವುದೇ ಕಟ್ಟುಪಾಡುಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಡಾ. ಬಿ. ಆರ್ ಅಂಬೇಡ್ಕರ್. ಜನಪ್ರತಿನಿಧಿಯಾಗಿರುವ ನಾನು ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುವಲ್ಲಿ ಜೊತೆಯಾಗಿರುತ್ತೇನೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು, ಜೀವನದಲ್ಲಿ ಸಾಧನೆ ಮಾಡಬೇಕೆಂದರೆ ಶಿಕ್ಷಕರ ಮಾರ್ಗದರ್ಶನ ಮುಖ್ಯ. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಿಎಸ್‌ಎಸ್ ಮುಖಂಡ
ದಿವಾಕರ್ ಹೆಚ್.ಎಲ್., ಇಲ್ಲಿಯವರೆಗೆ ಡಿ.ಎಸ್.ಎಸ್ ಮಾಡಿರುವ ಸಮಾಜ ಸೇವೆಯ ವಿವರ ಹಾಗೂ ಕಳೆದ ಬಹಳಷ್ಟು ವರ್ಷಗಳಿಂದ ಸರ್ಕಾರಿ ಶಾಲೆಯ ಶಿಕ್ಷಕ, ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಸುತ್ತಿರುವುದನ್ನು ಪ್ರಸ್ತಾಪಿಸಿದರು. ಮಕ್ಕಳ ವಿಭಾಗದ ವೈದ್ಯ ವೈದ್ಯಾಧಿಕಾರಿ ಪುರುಶೋತ್ತಮ್ ಮಾತನಾಡಿ, ಎಸ್ ಎಸ್ ಎಲ್ ಸಿ ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗಿರುತ್ತದೆ. ನಮ್ಮ ಬದುಕಿಗೆ ಮುಖ್ಯ ತಿರುವನ್ನು ನೀಡುವ ಸಮಯ ಇದಾಗಿದ್ದು, ಶಿಕ್ಷಕರ ಮಾರ್ಗದರ್ಶನವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಸಮಾಜಸೇವಕ ವಾಸುದೇವ್, ಪ್ರಸೂತಿ ವೈದ್ಯೆ ಡಾ. ಸೌಮ್ಯ, ಡಿ.ಎಸ್.ಎಸ್ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿದರು.
ಹೆಚ್. ವಿ. ದೇವದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿ.ಎಸ್.ಎಸ್ ವಿಭಾಗೀಯ ಸಂಚಾಲಕ ವೀರಭದ್ರಯ್ಯ,ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿಜಯ್,ಚಂದ್ರಶೇಖರ್, ಪಿ.ಕೆ ನಳಿನಿ ,ಲೋಕನಾಥ್ ಇದ್ದರು.